ಜಿಲ್ಲಾ, ತಾಲೂಕು ಶಕ್ತಿಸೌಧಕ್ಕೂ ದಾಂಗುಡಿ ಇಟ್ಟ ಕೋವಿಡ್
* ಜಿಲ್ಲಾಧಿಕಾರಿಗಳ ಕಚೇರಿಯೇ ಸೀಲ್‌ಡೌನ್ * ಮಂಗಳವಾರವಿಡೀ ಕಾರ್ಯನಿರ್ವಹಿಸದ ಮಿನಿ ವಿಧಾನಸೌಧ
ಬಾಗಲಕೋಟೆ ಆ.೧೧:
ಈವರೆಗೆ ಜಿಲ್ಲಾಡಳಿತ ಭವನದ ಸುತ್ತ ಗಿರಿಕಿ ಹೊಡೆಯುತ್ತಿದ್ದ ಕೊರೊನಾ ಈಗ ಜಿಲ್ಲಾಧಿಕಾರಿಗಳು, ಅಪರಜಿಲ್ಲಾಧಿಕಾರಿಗಳ ಕೊಠಡಿಗೂ ದಾಂಗುಡಿ ಇಟ್ಟಿದೆ. ಅತ್ತ ತಹಶೀಲ್ದಾರ ಕಚೇರಿಯಲ್ಲಿನ ಇಬ್ಬರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಒಂದು ದಿನದ ಮಟ್ಟಿಗೆ ನವನಗರದ ಮಿನಿವಿಧಾನಸೌಧವನ್ನು ಸೀಲ್‌ಡೌನ್‌ಗೆ ಒಳಪಡಿಸಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಜವಾನನಲ್ಲಿ ಸೋಂಕು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಒಂದು ದಿನದಮಟ್ಟಿಗೆ ಕಚೇರಿ ಕಾರ್ಯವನ್ನು ಸ್ಥಗಿತಗೊಳಿಸಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಶಕ್ತಿ ಕೇಂದ್ರಗಳಲ್ಲೇ ಕೋವಿಡ್ ಕಾಣಿಸಿಕೊಂಡಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಕಚೇರಿಗಳಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಆರಂಭಿಸಿದರೆ ಅದು ಆಡಳಿತಾತ್ಮಕ ಕಾರ್ಯಗಳಿಗೂ ಹಿನ್ನಡೆ ಆಗುವ ಆತಂಕ ಶುರುವಾಗಿದೆ. ಸೋಂಕಿತ ಸಿಬ್ಬಂದಿಯ ಚಿಕಿತ್ಸೆ ಈಗಾಗಲೇ ಆರಂಭಗೊAಡಿದೆ.
ತಹಶೀಲ್ದಾರ ಕಚೇರಿಯ ಓರ್ವ ಶಿರಸ್ತೇದಾರ ಹಾಗೂ ಓರ್ವ ವಿಷಯ ನಿರ್ವಾಹಕರಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ಕಚೇರಿಯನ್ನು ಸೀಲ್‌ಡೌನ್‌ಗೆ ಒಳಪಡಿಸಿರುವುದಾಗಿ ತಹಶೀಲ್ದಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ನಿತ್ಯ ಶತಕ ಪ್ರಕರಣಗಳು:ಒಂದು ಸಮಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಯಶಸ್ಸು ಕಂಡಿದ್ದ ಬಾಗಲಕೋಟೆ ಜಿಲ್ಲೆಯಲ್ಲೀಗ ನಿತ್ಯ ಶತಕ. ಕಳೆದೊಂದು ವಾರದಿಂದ ಪ್ರತಿದಿನ ೧೫೦ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ, ಮುಧೋಳ, ಜಮಖಂಡಿಗಳು ಇದರಲ್ಲಿ ಸಿಂಹಪಾಲು ನೀಡುತ್ತಿದ್ದು, ಇದೀಗ ಹುನಗುಂದ ತಾಲೂಕಿನಲ್ಲೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ರೋಗಲಕ್ಷಣವಿಲ್ಲದ ಸೋಂಕಿತರನ್ನು ಆಯಾ ತಾಲೂಕು ಕೇಂದ್ರಗಳಲ್ಲೇ ಚಿಕಿತ್ಸೆಗೆ ಒಳಪಡಿಸಲಾಗುತ್ತಿದ್ದು, ಉಸಿರಾಟದ ತೊಂದರೆ, ತೀವ್ರ ಜ್ವರದಿಂದ ಬಳಲುವ ರೋಗಿಗಳನ್ನು ಬಾಗಲಕೋಟೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ಜಿಲ್ಲಾಸ್ಪತ್ರೆಯು ೨೫೦ ಹಾಸಿಗೆ ಸಾಮರ್ಥ್ಯ ಹೊಂದಿದ್ದು, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆ ಸಾಮರ್ಥ್ಯವನ್ನು ೩೧೦ಕ್ಕೆ ಹೆಚ್ಚಿಸಲಾಗಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿದ್ದು, ಅದರ ಮಧ್ಯೆಯೂ ಜಿಲ್ಲಾಸ್ಪತ್ರೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಅರ್ಧಶತಕ ದಾಟಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಆಗಿದ್ದರು ನಿತ್ಯ ಸಾವಿನ ಸಂಖ್ಯೆ ಕೇಳಿ ಬರುತ್ತಿರುವುದು ಕೂಡ ಇಲ್ಲಿನ ಜನರನ್ನು ಆತಂಕಕ್ಕೆದೂಡಿದೆ. ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬರುವುದರಿಂದ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳುತ್ತಿದ್ದರೆ, ಅತ್ತ ಕೋವಿಡ್ ವರದಿ ವಿಳಂಬವಾಗುತ್ತಿರುವುದರಿAದ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ವಿಶ್ಲೇಷಣೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ಕಡ್ಡಾಯ ಪರೀಕ್ಷೆಯೂ ಇಲ್ಲ...!:ಈ ಮೊದಲು ಸೋಂಕಿತರು ಕಾಣಿಸಿಕೊಂಡ ಪ್ರದೇಶವನ್ನು ಸೀಲ್‌ಡೌನ್‌ಗೆ ಒಳಪಡಿಸಲಾಗುತಿತ್ತು. ಅದಾದ ನಂತರ ಪ್ರದೇಶದ ಬದಲಾಗಿ ಸೋಂಕಿತರ ಮನೆ ಮುಂದೆ ಬ್ಯಾರಿಕೇಡ್‌ಗಳನ್ನು ಇರಿಸಲಾಗುತಿತ್ತು,ಈಗ ಅದಕ್ಕೂ ಬ್ರೇಕ್ ಬಿದ್ದಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜಿಲ್ಲಾ ಕೇಂದ್ರ ಬಾಗಲಕೋಟೆಯ ಬಹುತೇಕ ಬಡಾವಣೆಗಳಲ್ಲೂ ಸೋಂಕಿತರು ಇರುವ ಮಾಹಿತಿ ಇದೆ. ಇನ್ನು ಸೋಂಕಿತರ ಕುಟುಂಬಸ್ಥರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುತಿತ್ತು. ಈಗ ಅದಕ್ಕೂ ಬ್ರೇಕ್ ಬಿದ್ದಿದೆ. ಹೋಂ ಕ್ವಾರಂಟೈನ್ ಎಂಬುದು ಕೂಡ ಸೋಂಕಿತರು, ಅವರ ಸಂಪರ್ಕಕಕ್ಕೆ ಬಂದವರ ಆಯ್ಕೆಗೆ ಬಿಡಲಾಗಿದೆ.