ಮಿಲ್ಕ್ ಪೌಡರ್ ಹಗರಣ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ ವಶಕ್ಕೆ 

ಹಾಲಿನ‌ಪುಡಿ ಕಳ್ಳಸಂತೆಗೆ ಸೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಮಹಾಲಿಂಗಪುರದಲ್ಲಿ ಸಿಐಡಿ ರಾಜಕೀಯ ಮುಖಂಡನೊಬ್ಬನನ್ನು ವಶಕ್ಕೆ ಪಡೆದಿದೆ.

ಮಿಲ್ಕ್ ಪೌಡರ್ ಹಗರಣ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ ವಶಕ್ಕೆ 

ನಾಡನುಡಿ ನ್ಯೂಸ್ 

ಬಾಗಲಕೋಟೆ ಜೂನ ೮: ಬೆಳಗಾವಿ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಕಿಂಗಪಿನ್ ಕಿರಣ ವೀರನಗೌಡರ ಬಂಧನದ ಬೆನ್ನಲ್ಲೇ ಆತನ ನಂಟು ಇರುವ ಹಾಲಿನ ಪುಡಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಅಂಗಡಿಯನ್ನು ಸಿಐಡಿ ಪೋಲಿಸರು ಬಂಧಿಸಿದ್ದಾರೆ.
     ಕಿರಣ ಬಂಧನದ  ಹೊತ್ತಿನಲ್ಲಿಯೆ ಸೋಮವಾರ ತಡರಾತ್ರಿ ಸಿಐಡಿ ತಂಡ ಮಹಾಲಿಂಗಪೂರಕ್ಕೆ ಆಗಮಿಸಿ ಶಿವಾನಂದನನ್ನ ಬಂಧಿಸಿ ಕರೆದೊಯ್ದಿದ್ದಾರೆಂದ ತಿಳಿದು ಬಂದಿದೆ.

ಆರೋಪಿ ಶಿವಾನಂದ ಮಹಾಲಿಂಗಪೂರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಅವರ ಪತಿ ಎಂಬುದು ಗಮನಾರ್ಹ.ಸ್ನೇಹಲ್ ಅಧ್ಯಕ್ಷರಾಗಿ ಆಯ್ಕೆಯಾಗುವಾಗಲೂ ಸಾಕಷ್ಟು ವಿವಾದಗಳಾಗಿದ್ದವು. ಗರ್ಭಿಣಿ ಸದಸ್ಯೆಯೊಬ್ಬಳ ತಳ್ಳಾಟ ಪ್ರಕರಣ ನಡೆದು, ಆಕೆಗೆ ಮತದಾನಕ್ಕೆ ಅವಕಾಶ ನೀಡದೆ ಸ್ನೇಹಲ್ ಅಧ್ಯಕ್ಷರಾದರು. ಶಾಸಕ ಸಿದ್ದು ಸವದಿ ಸಹ ಅಂದಿನ ತಳ್ಳಾಟ ಪ್ರಕರಣದಲ್ಲಿ ಆರೋಪ ಎದುರಿಸಿದ್ದರು. 

    ಈಗಾಗಲೆ ವರದಿಯಾಗಿರುವಂತೆ  ಅಂಗನವಾಡಿಗಳಿಗೆ ಪೂರೈಕೆ ಯಾಗಬೇಕಿದ್ದ ಹಾಲಿನ ಪುಡಿ ಸರಬರಾಜಾಗದೆ ಕಳ್ಳಸಂತೆ ಸೇರಿತ್ತು,ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದ ಈ ಪ್ರಕರಣದಲ್ಲಿ ಗೋದಾಮಿನ ಮೇಲೆ ಪೋಲಿಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದರು. ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಮೇಲ್ಮನವಿ ಸಲ್ಲಿಸಿ ಹೈಕೋರ್ಟನಲ್ಲಿ ಜಾಮೀನು ಪಡೆದಿದ್ದರು.
   ಈ ಪ್ರಕರಣದಲ್ಲಿ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವಾಗ ಪ್ರಕರಣದಲ್ಲಿ ಶಿವಾನಂದ ಅಂಗಡಿ ಹೆಸರು ಕೇಳಿಬಂದಿತ್ತು‌. ಬಂಧನದ ವಾಸನೆ ತಿಳಿದಿದ್ದ ಶಿವಾನಂದ ಅವನ ಸಹೋದರನ ಮೂಲಕ ಬೆಳಗಾವಿ ಪ್ರಕರಣದ ಕಿಂಗ ಪಿನ್ ಕಿರಣ ಮೂಲಕ ತನಿಖಾಧಿಕಾರಿಯನ್ನೆ ಬದಲಾಯಿಸುವ  ಪ್ರಭಾವ ಬೀರಿದ್ದ. ಈ ವಿಚಾರ ಬೆಳಕಿಗೆ ಬರುತಿದ್ದಂತೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದ್ದು,  ಶಿವಾನಂದ ಬಂಧನವಾಗಿದೆ. ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾಯ್ದು ನೋಡಬೇಕಿದೆ.