ಹೊಸ ವರ್ಷ ಸಂಭ್ರಮಾಚರಣೆ: ಕುಡಿದು ವಾಹನ ಚಲಾಯಿಸಿದರೆ ಜಪ್ತಿ- ಡಿಸಿ ಎಚ್ಚರಿಕೆ
ಡಿ.೩೧ರ ಮಧ್ಯರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದರೆ ವಾಹನ ಜಪ್ತಿ ಮಾಡುವುದಾಗಿ ಡಿಸಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಎಚ್ಚರಿಸಿದ್ದಾರೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ವರ್ಷಾಚರಣೆ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ವಾಹನ ಜಪ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ನವನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಸ್ಥಾಪಿಸಲಾದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮದವರಿಗೆ ಈ ವಿಷಯ ತಿಳಿಸಿದ ಅವರು ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಅಚರಿಸುವ ಹಿನ್ನಲೆಯಲ್ಲಿ ಡಿ.31ರಂದು ರಾತ್ರಿ 12 ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು, ಆದರೆ ಹೊಸ ವರ್ಷಾಚರಣೆ ಹಿನ್ನಲೆ ಅದನ್ನು ಬದಲಾಯಿಸಿ ಡಿ.30ರ ರಾತ್ರಿ 12 ವರೆಗೆ ಮಾತ್ರ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಆದರೆ ಹೊಸ ವರ್ಷಾಚರಣೆ ಸಂಬ್ರಮದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಅದನ್ನು ತಡೆಯಲು ಡ್ರಿಂಕ್ & ಡ್ರೈವ್ ಮಾಡಿದಲ್ಲಿ ವಾಹನ ಜಪ್ತ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲೋಕೇಶ ಜಗಲಾಸರ ಮಾತನಾಡಿದ ಅವರು ಜಿಲ್ಲೆಯ ಐತಿಹಾಸಿಕ ಸ್ಥಳಗಳು ಸಹ ಸಾರ್ವಜನಿಕ ಸ್ಥಳಗಳಾಗಿರುವದರಿಂದ ಹೊಸ ವರ್ಷಾಚರಣೆಗೆ ಅವಕಾಶವಿರುವದಿಲ್ಲ. ಹೊಟೇಲ, ಬಾರ್ ಮತ್ತು ರೆಸ್ಟೋರೆಂಟಗಳು ನಿಯಮಾವಳಿಗಳಂತೆ ಎಂದಿನಂತೆ ನಡೆಯಲಿದ್ದು, ಹೊಸದಾಗಿ ಯಾವುದೇ ರೀತಿಯ ಪಾರ್ಟಿಗಳಿಗೆ ಅವಕಾಶವಿರುವದಿಲ್ಲವೆಂದು ತಿಳಿಸಿದರು.