ಸಾಧನೆಗಳೆ ನನ್ನ ಗೆಲುವಿಗೆ ಶ್ರೀರಕ್ಷೆ: ಪ್ರಕಾಶ ತಪಶೆಟ್ಟಿ
ಬಾಗಲಕೋಟೆ ನ.೧:
ನಾನು ಮಾತನಾಡುವುದಿಲ್ಲ. ಸಾಧನೆಗಳೇ ನನ್ನ ಮಾತಾಗುತ್ತದೆ. ಮೂರುವರೆ ದಶಕಗಳ ಸಹಕಾರಿ ಕ್ಷೇತ್ರದ ನನ್ನ ಸೇವೆ, ಎರಡು ಅವಧಿಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಿ ನನ್ನ ಕಾರ್ಯಕ್ಷೇತ್ರ ಈ ಬಾರಿಯ ನಿರ್ದೇಶಕ ಮಂಡಳಿಯ ಚುನಾವಣೆ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಿನ್‌ಶೇತ್ಕಿ ಸಹಕಾರಿ ಸಂಘಗಳ ಕ್ಷೇತ್ರದ ಅಭ್ಯರ್ಥಿ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಾನು ಚುನಾವಣೆ ಎದುರಿಸಿದ ಸಂದರ್ಭದಲ್ಲಿ ಪರಾಭವಗೊಳ್ಳಲು ಕಾರಣವಾದ ಅಂಶಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಮತ ಹಾಕದವರಿಗೂ ತಪ್ಪಿನ ಮನವರಿಕೆ ಆಗಿದೆ. ಅವರೂ ಆ ತಪ್ಪು ಮಾಡುವುದಿಲ್ಲ. ನಾನೂ ತಪ್ಪು ಮಾಡುವುದಿಲ್ಲ ಈ ಕಾರಣಕ್ಕೆ ಈ ಬಾರಿಯ ನನ್ನ ಗೆಲವು ಶತ ಸಿದ್ಧ ಎಂದರು.
ಅವಕಾಶ ವಂಚಿತರಾಗಿದ್ದ ೧೦ ಸೊಸೈಟಿಗಳಿಗೆ ಮತದಾನದ ಅವಕಾಶ ಸಿಕ್ಕಿದೆ ೧೪೨ ಸಂಸ್ಥೆಗಳಿಗೂ ಮತದಾನದ ಹಕ್ಕು ನ್ಯಾಯಾಲಯದ ಮೂಲಕ ದೊರೆಯಲು ನಾನು ಪ್ರಯತ್ನ ಮಾಡಿದ್ದೇನೆ. ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿ ಆಗಲಿದೆ ಎಂದು ಹೇಳಿದ ಅವರು ಕೇವಲ ಪತ್ತಿನ ಸಹಕಾರಿ ಸಂಘಗಳಿಗೆ ಮಾತ್ರ ಸೀಮಿತವಾಗಿದ್ದ ಕುಡಿಯುವ ನೀರಿನ ಘಟಕದ ನೆರವಿನ ಯೋಜನೆಯನ್ನು ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಿನ್‌ಶೇತ್ಕಿ ಸಹಕಾರಿ ಸಂಘಗಳಿಗೆ ಕೊಡಿಸಲು ನಾನು ಕಾರಣ. ಹಾಗೆಯೇ ಇವುಗಳಿಗೆ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ.ಗಳವರೆಗಿದ್ದ ಸಹಾಯಧನವನ್ನು ೨ ಲಕ್ಷ ರೂ.ಗಳವರೆಗೆ ಹೆಚ್ಚಿಸಲು ಸಹ ನನ್ನ ಒತ್ತಾಯ ಕಾರಣ ಎಂದು ೨೦೧೪ರಲ್ಲಿ ಡಿಸಿಸಿ ಬ್ಯಾಂಕ್ ಕೈಗೊಂಡ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ ಮೂರುವರೆ ದಶಕದಿಂದ ನಾನು ನಿರ್ದೇಶಕ, ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಅಧಿಕಾರಕ್ಕಾಗಿ ನಾನು ಸಹಕಾರ ಕ್ಷೇತ್ರಕ್ಕೆ ಬಂದವನಲ್ಲ. ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇನೆ. ಇದೇ ಅನುಭವದ ಆಧಾರದ ಮೇಲೆ ಡಿಸಿಸಿ ಬ್ಯಾಂಕ್‌ನಲ್ಲಿ ಕೋರ್ ಬ್ಯಾಂಕಿAಗ್ ಸೇರಿದಂತೆ ಎಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನೆರವಾಗಿದ್ದೇನೆ. ಇದು ನಿರ್ದೇಶಕ ಮಂಡಳಿಯ ಅನುಭವಕ್ಕೆ ಬಂದಿದೆ ಎಂದರು.
ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಿಗೆ ಮಾತ್ರ ತರಬೇತಿ, ಪ್ರವಾಸದ ಅವಕಾಶವಿದ್ದಿದ್ದನ್ನು ನಮ್ಮ ಕ್ಷೇತ್ರಕ್ಕೂ ವಿಸ್ತರಿಸುವ ನಿರ್ಣಯ ಆಗಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಅದು ಅನುಷ್ಠಾನಕ್ಕೆ ಬಂದಿಲ್ಲ ಎಂದು ಹೇಳಿದ ಅವರು ಪ್ರತಿಸ್ಪರ್ಧಿ ಹೆಸರು ಹೇಳದೆ ನಾನು ಯಾರನ್ನೂ ಟೀಕಿಸುವುದಿಲ್ಲ. ಆಮಿಷ, ಪ್ರಭಾವದ ಆಧಾರದ ಮೇಲೆ ಗೆಲ್ಲುವುದಕ್ಕಿಂತಲೂ ಸಾಧನೆಯ ಆಧಾರದ ಮೇಲೆ ಗೆಲ್ಲಬೇಕು. ನನ್ನ ಮನವಿ ಕೂಡ ಇದೇ ಆಗಿದೆ. ಈ ಕಾರಣಕ್ಕೆ ಪಕ್ಷಾತೀತವಾಗಿ ಎಲ್ಲರೂ ನನ್ನ ಬೆಂಬಲಿಸುತ್ತಿದ್ದಾರೆ. ಕೆಲವರು ಬಹಿರಂಗವಾಗಿ, ಇನ್ನೂ ಕೆಲವರು ಆಂತರಿಕವಾಗಿ ಗೆಲ್ಲಿಸಲು ಸಹಾಯ ಮಾಡುತ್ತಿದ್ದಾರೆ. ಈ ಬಾರಿ ನನ್ನ ಗೆಲವು ಶತಸಿದ್ಧ ಎಂದರು.
ಅಶೋಕ ಲಾಗಲೋಟಿ ಅವರು ನಾಮಪತ್ರ ವಾಪಸ್ಸು ಪಡೆದು ನನ್ನ ಪರವಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ನಾವಿಬ್ಬರೂ ಬಿಜೆಪಿ ಅವರು ಹೀಗಾಗಿ ಅವರು ನನಗೆ ಸಹಕಾರ ನೀಡಿದ್ದಾರೆ ಎಂದು ಕೃತಜ್ಞತೆಯಿಂದ ಸ್ಮರಿಸಿ ಗೆಲುವಿಗಾಗಿ ಸಹಕಾರ ಕೋರಿದರು.
ಬಸವೇಶ್ವರ ಬ್ಯಾಂಕ್ ನಿರ್ದೇಶಕರಾದ ವಿ.ವಿ.ಶಿರಗಣ್ಣವರ, ಶ್ರೀನಿವಾಸ ಬಳ್ಳಾರಿ, ಶಶಿಧರ ಜಿಗಳೂರ, ಪಟ್ಟಣದ, ಕಂಕಣಮೇಲಿ, ಸುರೇಶ ಜಂಗಿ, ಗೋಡಿ, ಉಷಾ ಜಿಗಜಿನ್ನಿ ಮತ್ತಿತರರು ಉಪಸ್ಥಿತರಿದ್ದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ಆಗಿದ್ದ ಸಂದರ್ಭದಲ್ಲಿ ಬಹುತೇಕ ಬ್ಯಾಂಕ್‌ಗಳು, ಸೌಹಾರ್ದ ಬ್ಯಾಂಕ್‌ಗಳಿಗೆ ನವನಗರದಲ್ಲಿ ನಿವೇಶನ ಕೊಡಿಸಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ನಿರಂತರ ಸಂಪರ್ಕದ ಮೂಲಕ ಸಹಕಾರಿ ರಂಗದ ಭಾಗವಾಗಿದ್ದೇನೆ.ಪ್ರತಿಯೊಬ್ಬರಿಗೂ ಇದರ ಬಗ್ಗೆ ಅನುಭವಕ್ಕೆ ಬಂದಿದೆ.ಜಿಲ್ಲೆಯ ಕ್ಷೇತ್ರದ ಸಂಚಾರದ ಸಂದರ್ಭದಲ್ಲಿ ಮತದಾರರು ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನ ಗೆಲುವಿಗೆ ಇದೆಲ್ಲವೂ ಸಹಕಾರಿ ಆಗಲಿದೆ ಎಂದು ಪ್ರಕಾಶ ತಪಶೆಟ್ಟಿ ತಿಳಿಸಿದರು.