ನಗರಸಭೆಯಲ್ಲಿ ಪ್ರತಿಧ್ವನಿಸಿದ ಕಾಟನ್ ಮಾರ್ಕೆಟ್ ತೆರವು ವಿಚಾರ
* ಹಿಂದಿನ ಐದು ವರ್ಷ ನಡೆದಿದ್ದು ಇದೇ ಕೆಲಸ * ಶಾಸಕ ಚರಂತಿಮಠ ಆಕ್ರೋಶ

ನಾಡನುಡಿ ನ್ಯೂಸ್
ಬಾಗಲಕೋಟೆ:
ನಗರದ ಕಾಟನ್ ಮಾರುಕಟ್ಟೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸೋಮವಾರ ನಡೆದ ನಗರಸಭೆ ಮೊದಲ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಇದ್ದ ಮಾರುಕಟ್ಟೆಯನ್ನೂ ಬಂದ್ ಮಾಡಿಸಿದಕ್ಕಾಗಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಕಾಂಗ್ರೆಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆಯಲ್ಲಿ ಲಭ್ಯವಿರುವ ಅನುದಾನವನ್ನು ಬೇರೆ ಇಲಾಖೆಗೆ ನೀಡಕೂಡದು ಅದನ್ನು ನಗರಸಭೆ ಸದಸ್ಯರಿಗೆ ಅನುದಾನವಾಗಿ ನೀಡಬೇಕೆಂದು ಸಲಹೆ ಮಾಡುತ್ತಲೇ ಕಾಂಗ್ರೆಸ್ ಸದಸ್ಯ ಹಾಜಿಸಾಬ ದಂಡಿನ ವಾಂಬೆ ಕಾಲನಿ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಆಗ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಮಾತನಾಡಿ ಐದು ವರ್ಷ ಮಾತನಾಡದೆ ಈಗ ಮಾತನಾಡುತ್ತೀರಿ ನಿಮ್ಮ ವಾರ್ಡ್ ಎಷ್ಟು ಅಭಿವೃದ್ಧಿ ಆಗಿದೆ ಗೊತ್ತು ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಚೆನ್ನವೀರ ಅಂಗಡಿ ಈಗಿರುವ ವಿಚಾರವನ್ನಷ್ಟೇ ಮಾತನಾಡಿ ಅನಾವಶ್ಯಕ ವಿಚಾರಗಳು ಅಲ್ಲ ಎಂದು ಅವರಾದಿ ಅವರಿಗೆ ಹೇಳಿದರು. ಈ ವಾಗ್ವಾದ ತಾರಕಕ್ಕೇರುತ್ತಲೇ ಕಾಟನ್ ಮಾರ್ಕೆಟ್ ವಿಚಾರ ಪ್ರಸ್ತಾಪವಾಯಿತು.
ಆಗ ಮಧ್ಯ ಪ್ರವೇಶಿಸಿದ ಶಾಸಕ ಡಾ.ವೀರಣ್ಣ ಚರಂತಿಮಠ, ನೂರು ವರ್ಷ ಲೀಸ್‌ಗೆ ಕೊಟ್ಟ ನಂತರ ಅವರೇ ಮಾಲೀಕರು ಎಂಬ ಅನೇಕ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಲ್ಲಿದ್ದ ವ್ಯಾಪಾರಸ್ಥರು ಹಿಂದೆ ದುಡ್ಡಿಗೆ ಮಹತ್ವವಿದ್ದಾಗ ನಗರಸಭೆಗೆ ನೀಡಿ ಮುನ್ನಡೆಸಿದ್ದರು ಆಗ ದಿನಮಾನಗಳು ಕಷ್ಟಕರವಾಗಿದ್ದವು. ಅಂಥವರನ್ನು ಖಾಲಿ ಮಾಡಿಸಲಾಯಿತು. ಅಲ್ಲಿನ ಜನರ ಕೆಲಸವನ್ನು ಕಸಿದುಕೊಳ್ಳಲಾಯಿತು. ಹಿಂದಿನ ಅವಧಿಯ ಐದು ವರ್ಷ ಇದನ್ನು ಹೊರತುಪಡಿಸಿದರೆ ಏನೂ ಮಾಡಿಲ್ಲ ಎಂದರು.
ಇನ್ನಾದರೂ ನಮಗೆ ಸಹಕಾರ ನೀಡುವುದನ್ನು ಕಲಿಯಿರಿ. ಇಂಥದೇ ವಿಚಾರ ಬೇಡ. ಈಗಲೂ ಸದಸ್ಯರು ತಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಹೇಳಲಿ ಯಾವುದೇ ತಾರತಮ್ಯವಿಲ್ಲದೇ ಅಭಿವೃದ್ಧಿಪಡಿಸುತ್ತೇವೆ. ಅದನ್ನು ಹೊರತುಪಡಿಸಿ ರಾಜಕೀಯ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಚರಂತಿಮಠ ಹೇಳಿದರು. ಇನ್ನಾದರೂ ನಮಗೆ ಸಹಕಾರ ನೀಡುವುದನ್ನು ಕಲಿಯಿರಿ. ಇಂಥದೇ ವಿಚಾರ ಬೇಡ. ಈಗಲೂ ಸದಸ್ಯರು ತಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಹೇಳಲಿ ಯಾವುದೇ ತಾರತಮ್ಯವಿಲ್ಲದೇ ಅಭಿವೃದ್ಧಿಪಡಿಸುತ್ತೇವೆ. ಅದನ್ನು ಹೊರತುಪಡಿಸಿ ರಾಜಕೀಯ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಚರಂತಿಮಠ ಹೇಳಿದರು.
ಗುತ್ತಿಗೆ ವಿಚಾರದಲ್ಲಿ ೧೦% ಮೇಲೆ ಕೋಟ್ ಮಾಡುವುದನ್ನು ಪರಿಗಣಿಸಬಾರದು. ಅಷ್ಟೊ ಪ್ರಮಾಣದಲ್ಲಿ ಕೋಟ್ ಮಾಡಿದವರು ಅಭಿವೃದ್ಧಿಯನ್ನು ಎಷ್ಟು ಪ್ರಮಾಣದಲ್ಲಿ ಮಾಡುತ್ತಾರೆ ಗೊತ್ತಿರುವ ಸಂಗತಿ. ಸ್ಪರ್ಧೆ ಇದ್ದರೂ ೧೦% ಮೀರಬಾರದು ಎಂದು ಹೇಳಿದರು.
ದೀಪಾವಳಿ ನಂತರ ರಸ್ತೆ ಕಾಮಗಾರಿ:ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ದೀಪಾವಳಿ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.ಮಳೆಗಾಲದ ಹಿನ್ನೆಲೆಯಲ್ಲಿ ಕಾಯಲಾಗಿತ್ತು. ಇನ್ನು ಮುಂದೆ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ ಎಂದು ಹೇಳಿದರು.