PSI ನೇಮಕಾತಿ ಹಗರಣ: ಮದುವೆಯಾಗಿ ನಾಲ್ಕನೇ ದಿನಕ್ಕೆ ವ್ಯಕ್ತಿ ಸಿಐಡಿ ವಶದಲ್ಲಿ
ಕಲಬುರಗಿಯಿಂದ ಹಬ್ಬಿರುವ ಪಿಎಸ್ಐ ನೇಮಕಾತಿ ಹಗರಣದ ಜಾಲ ಬಾಗಲಕೋಟೆವರೆಗೂ ಹಬ್ಬಿದೆ. ಜಮಖಂಡಿಯಲ್ಲಿ ಕಳೆದ ಐದಾರು ದಿನದಿಂದ ಬೀಡುಬಿಟ್ಟಿದ್ದ ಸಿಐಡಿ ತಂಡ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿದೆ. ಈತನನ್ನು ವಶಕ್ಕೆ ಪಡೆದಿರುವುದು ಪ್ರಕರಣಕ್ಕೆ ಬೇರೆಯದ್ದೆ ತಿರುವು ಪಡೆದುಕೊಂಡಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ
ಪಿಎಸ್ಐ ಅಕ್ರಮ ನೇಮಕಾತಿ ಡೀಲ್ ನ ಜಾಲ ಬಾಗಲಕೋಟೆ ಜಿಲ್ಲೆಗೂ ಹಬ್ಬಿದೆ. ಬುಧವಾರ ಜಿಲ್ಲೆಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ವ್ಯಕ್ತಿಯಿಂದ ಪ್ರಕರಣಕ್ಕೆ ಮಹತ್ವದ ತಿರುವುದು ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಜಮಖಂಡಿ ತಾಲೂಕು ತೊದಲಬಾಗಿಯ ಶ್ರೀಕಾಂತ ಚೌರಿ ಎಂಬಾತನನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಸಿಐಡಿ ಅಧಿಕಾರಿಗಳ ತಂಡ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಡ್ರಿಲ್ ನಡೆಸಿದೆ. ಆರೋಪಿತನ ಹಿನ್ನಲೆ, ಜಾತಕವನ್ನು ಮೊದಲೇ ಅಧ್ಯಯನ ಮಾಡಿಬಂದಂತಿದ್ದ ತಂಡವು ಆತನ ಕುರಿತಾದ ಸಾಕಷ್ಟು ದಾಖಲೆಗಳನ್ನು ಕಲೆಹಾಕಿ ಬೆಂಗಳೂರಿಗೆ ಕರೆದೊಯ್ದಿದೆ ಎನ್ನಲಾಗಿದೆ.
ಯರಗಟ್ಟಿ ಯಲ್ಲಮ್ಮದೇವಿ ದರ್ಶನ
ಸಿಐಡಿ ವಶದಲ್ಲಿರುವ ವ್ಯಕ್ತಿ ಶ್ರೀಕಾಂತ ಚೌರಿ ಮೇ ೧೪ರಂದಷ್ಟೇ ಜಮಖಂಡಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ. ಬುಧವಾರ ಕುಟುಂಬಸ್ಥರೊಂದಿಗೆ ಈತ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಶ್ರೀಯಲ್ಲಮ್ಮದೇವಿ ದರ್ಶನಕ್ಕೆ ಬಂದಾಗ ಆತನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶ್ರೀಕಾಂತ ಚೌರಿಯನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಆತನ ಬಳಿ ತಾನು ಕರಕುಶಲಕರ್ಮಿ ನಿಗಮ ಮಂಡಳಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂದು ಬರೆದಿದ್ದ ವಿಸಿಟಿಂಗ್ ಕಾರ್ಡ್ ಲಭಿಸಿದ್ದು, ಈತ ಕೆಲಕಾಲ ಅಲ್ಲಿ ಕೆಲಸ ಮಾಡಿದ್ದು ಸಹ ದೃಢಪಟ್ಟಿದೆ.
ಧಾರವಾಡದ ಇನ್ಸ್ಪೈರ್ ಇಂಡಿಯಾ ಅಕಾಡೆಮಿಯ ಮಾಜಿ ನಿರ್ದೇಶಕ ಈತ ಎಂದು ಹೇಳಲಾಗಿದ್ದು, ಬೆಂಗಳೂರಿನ ವಿಜಯನಗರದಲ್ಲೂ ಮನೆ ಹೊಂದಿದ್ದ ಎನ್ನಲಾಗಿದೆ.
ಧಾರವಾಡ- ವಿಜಯನಗರ ಎರಡೂ ಪ್ರದೇಶಗಳಲ್ಲಿ ನೂರಾರು ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ ಗಳಿದ್ದು, ಎರಡೂ ಕಡೆ ಈತನ ಹೆಜ್ಜೆ ಗುರುತುಗಳಿರುವುದರಿಂದ ಪ್ರಕರಣಕ್ಕೆ ಬೇರೆದ್ದೆ ತಿರುವು ಲಭಿಸುವ ಲಕ್ಷಣಗಳು ಗೋಚರಿಸಿವೆ. ಈತನನ್ನು ಸಿಐಡಿ ಅಧಿಕಾರಿಗಳು ಕರೆದೊಯ್ದಿರುವುದು ಬೆಳಗಾವಿ, ಬಾಗಲಕೋಟೆ, ಧಾರವಾದ, ವಿಜಯಪುರ ಜಿಲ್ಲೆಗಳು ಹಾಗೂ ರಾಜಧಾನ ಬೆಂಗಳೂರಿನಲ್ಲೂ ಸಂಚಲನ ಮೂಡಿದೆ.
ಈತ ಹಲವು ಜನಪ್ರತಿನಿಧಿಗಳೊಂದಿಗೆ ಒಡನಾಡಿಯಾಗಿದ್ದ ಎಂಬುದು ಸಹ ಬೆಳಕಿಗೆ ಬಂದಿದ್ದು, ಒಟ್ಟಾರೆ ಇಡೀ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆಯುವ ಸಾಧ್ಯತೆ ಇದೆ.