ಪ್ರವಾಹ ಬಾಧಿತ ಪ್ರದೇಶಗಳಿಗೆ ಡಿಸಿ ರಾಜೇಂದ್ರ ಭೇಟಿ
ಬಾಗಲಕೋಟೆ : ಹಾಗೂ ಪ್ರವಾಹದಿಂದ ಉಂಟಾದ ಮುಧೋಳ ಮತ್ತು ಜಮಖಂಡಿ ತಾಲೂಕಿನ ಬಾಧಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಧೋಳ ತಾಲೂಕಿನಲ್ಲಿ ಮುಗುಗಳೆಯಾಗಿರುವ ಚಿಚಖಂಡಿ ಮತ್ತು ಯಾದವಾಡ ಸೇತುವ ಸ್ಥಳಕ್ಕೆ ಭೇಟಿ ನೀಡಿ ನೀರಿನ ಪ್ರಮಾಣವನ್ನು ಪರಿಶೀಲನೆ ಮಾಡಿದರು. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಮುಧೋಳ ಪಟ್ಟಣದಲ್ಲಿರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿರುವ ಸಂತ್ರಸರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಮತ್ತು ಜಂಬಗಿ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಷಣ ಕ್ಷಣಕ್ಕೂ ಹರಿದು ಬರುವ ನೀರಿನ ಪ್ರಮಾಣದ ಮೇಗೆ ನಿಗಾವಹಿಸಬೇಕು. ಬಾಧಿತಗೊಳ್ಳುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಸಂತ್ರಸ್ಥರಿಗೆ ಕಾಳಜಿ ಕೇಂದ್ರದಲ್ಲಿ ಇರಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆಲಗೂರ ಗ್ರಾಮದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಜುಲೈ 26 ಮದ್ಯಾಹ್ನದ ವರದಿ ಪ್ರಕಾರ ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ 392800 ಕ್ಯೂಸೆಕ್ಸ್, ಘಟಪ್ರಭಾ ನದಿಗೆ 74923 ಕ್ಯೂಸೆಕ್ಸ್ ಹಾಗೂ ಮಲಪ್ರಭಾ ನದಿಗೆ 18000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ 31 ಗ್ರಾಮಗಳಿಗೆ ನೀರು ನುಗ್ಗಿದ್ದು, ಯಾವುದೇ ವ್ಯಕ್ತಿಯ ಜೀವಹಾನಿಯಾಗಿರುವದಿಲ್ಲ. ಜಮಖಂಡಿ ತಾಲೂಕಿನ 1 ಆಕಳು, 1 ಕರು, ರಬಕವಿ-ಬನಹಟ್ಟಿ ತಾಲೂಕಿನ 3 ಆಡುಗಳು ಮರಣ ಹೊಂದಿರುತ್ತವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜುಲೈ 21 ರಿಂದ ಇಲ್ಲಿಯವರೆಗೆ 68 ಮನೆಗಳು ಬಾಗಶಃ ಹಾನಿಗೊಳಗಾಗಿರುತ್ತವೆ. 8787 ಹೆಕ್ಟೆರ್ ಕೃಷಿ ಹಾಗೂ 251.2 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿರುತ್ತದೆ. ವಿದ್ಯುತ್ ಕಂಬಗಳು, ರಸ್ತೆ, ಸೇತುವೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ವರದಿ ತಯಾರಿಸಲಾಗುತ್ತಿದೆ. ನೆರೆ ಸಂತ್ರಸ್ಥರಿಗೆ ಒಟ್ಟು 31 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ 2933 ಸಂತ್ರಸ್ಥರಿಗೆ ಆಶ್ರಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಭೇಟಿ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಮುಧೋಳ ತಹಶೀಲ್ದಾರ ಬಾಡಗಿ, ಜಮಖಂಡಿ ತಹಶೀಲ್ದಾರ ಪ್ರಕಾಶ ಚನಗೊಂಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.