ಡಿಸಿಸಿ ಬ್ಯಾಂಕ್ ಗದ್ದುಗೆ: ಘಟಾನುಘಟಿಗಳಲ್ಲ, ಬಂಡಾಯವೆದ್ದವರದೇ ಅಂತಿಮ ತೀರ್ಮಾನ
ಡಿಸಿಸಿ ಬ್ಯಾಂಕಿನ ೧೩ ನಿರ್ದೇಶಸ್ಥಾನಳಲ್ಲಿ 6ರಲ್ಲಿ ಕಾಂಗ್ರೆಸ್ ಬೆಂಬಲಿತ , 5 ರಲ್ಲಿ ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಸಹಕಾರಿ ಇಲಾಖೆ ಉಪನಿಬಂಧಕ ಹಾಗೂ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು ೧೫ ಮತಗಳಿರುತ್ತದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಕಂಪ್ಲೀಟ್ ಚಿತ್ರಣ ಇಲ್ಲಿದೆ.
ನಾಡನುಡಿ ವಿಶೇಷ
ಬಾಗಲಕೋಟೆ:
ಹಾಲಿ, ಮಾಜಿ ಶಾಸಕರಗಳ ಎಂಟ್ರಿ ಮೂಲಕ ಡಿಸಿಸಿ ಬ್ಯಾಂಕ್ ಹೆಚ್ಚಿನ ರಂಗುಪಡೆದಿದೆ. ಅನುಭವಿಗಳು, ಘಟಾನುಘುಟಿಗಳು ಬ್ಯಾಂಕಿನ ನಿರ್ದೇಶಕರಾಗಿದ್ದಾರಾದರೂ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಬೇಕೆಂಬುದು ಮಾತ್ರ ಇವರ ಕೈಯಲ್ಲಿ ಇಲ್ಲ.
ಹೌದು ಎರಡೂ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಬಂಡಾಯವಾವಿ ಸ್ಪರ್ಧಿಸಿ ಗೆಲವು ಸಾಧಿಸಿರುವ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಇಲ್ಲದೇ ಈ ಬಾರಿ ಘಟಾನುಘಟಿಗಳಿಗೆ ಆಡಳಿತ ಮಂಡಳಿ ಮೇಲೆ ಹಿಡಿತ ಸಾಧಿಸಲು ಅವಕಾಶವಿಲ್ಲ.
ಹೀಗಾಗಿ ನೇಕಾರ ಕ್ಷೇತ್ರದಿಂದ ಆಯ್ಕೆಯಾದ ಮುರುಗೇಶ ಕಡ್ಲಿಮಟ್ಟಿ ಹಾಗೂ ಬಾದಾಮಿ ಪಿಕೆಪಿಎಸ್ ನಿಂದ ಆಯ್ಕೆಯಾದ ಕುಮಾರಗೌಡ ಜನಾಲಿ ಅವರ ನಡೆಯ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ಅವಲಂಭಿಸಿದೆ.
ಇವರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಬೆಂಬಲಿತ ನೂತನ ನಿರ್ದೇಶಕರು ಹರಸಾಹಸಪಡುತ್ತಿದ್ದಾರೆ.
೧೫ ದಿನದಲ್ಲಿ ಆಗಬೇಕು ಆಯ್ಕೆ
ಸಹಕಾರಿ ನಿಯಮದ ಅನುಸಾರ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದ ನಂತರ ೧೫ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಬೇಕು. ಸೋಮವಾರದ ಹೊತ್ತಿಗೆ ದಿನಾಂಕ ನಿಗದಿ ಆಗುವ ಸಾಧ್ಯತೆಯಿದೆ. ೧೩ ಚುನಾಯಿತ ನಿರ್ದೇಶಕ ಮಂಡಳಿಯಲ್ಲಿ ಸಹಕಾರಿ ಇಲಾಖೆಯ ಉಪನಿಬಂಧಕರು ಹಾಗೂ ಅಪೇಕ್ಸ್ ಬ್ಯಾಂಕಿನ ನಿಯೋಜಿತ ಪ್ರತಿನಿಧಿ ಮತದಾನದ ಹಕ್ಕು ಹೊಂದಿದ್ದು, ಸಂಸ್ಥೆಯಲ್ಲಿ ಸರ್ಕಾರದ ಶೇರು ಬಂಡವಾಳ ಇಲ್ಲದ ಕಾರಣ ಸರ್ಕಾರದಿಂದ ಯಾವುದೇ ನಾಮಕರಣ ಇರುವುದಿಲ್ಲ.
ಈಗ ೧೫ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಅಧ್ಯಕ್ಷ ಗಾದೆಗೆ ಬರಬೇಕಾದವರು ೮ ಮತಗಳನ್ನು ಕಡ್ಡಾಯವಾಗಿ ಪಡೆಯಲೇಬೇಕು. ಈ ನಂಬರ್ ಗೇಮ್‌ನಲ್ಲಿ ಮ್ಯಾಜಿಕ್ ಮಾಡುವವರು ಯಾರು ಎಂಬುದೆ ಸದ್ಯದ ಪ್ರಶ್ನೆ.
ಅಜಯಕುಮಾರ ಸರನಾಯಕ, ನಂದಕುಮಾರ ಪಾಟೀಲ ಅವಿರೋಧವಾಗಿ ಆಯ್ಕೆ ಆಗಿದ್ದು, ಮತದಾನದ ಮೂಲಕ ಗೆಲವು ಸಾಧಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಸಚಿವ ಎಚ್.ವೈ.ಮೇಟಿ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದರೆ.
ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮುಧೋಳ ಪಿಕೆಪಿಎಸ್‌ನಿಂದ ಆಯ್ಕೆಯಾದ ರಾಮಣ್ಣ ತಳೇವಾಡ, ತೇರದಾಳ ಶಾಸಕ ಸಿದ್ದು ಸವದಿ, ಇಳಕಲ್ ಪಿಕೆಪಿಎಸ್‌ನ ಶಿವನಗೌಡ ಅಗಸಿಮುಂದಿನ ಅವರು ಬಿಜೆಪಿ ಬೆಂಬಲಿತರಾಗಿ ಚುನಾಯಿತರಾಗಿದ್ದಾರೆ. ಬಾದಾಮಿಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಕುಮಾರಗೌಡ ಜನಾಲಿ, ನೇಕಾರ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಮುರುಗೇಶ ಕಡ್ಲಿಮಟ್ಟಿ ಆಯ್ಕೆ ಆಗಿದ್ದಾರೆ. ಈ ಇಬ್ಬರು ನಿರ್ಣಾಯಕರಾಗಿರುವುದರಿಂದ ಇಬ್ಬರಲ್ಲಿ ಒಬ್ಬರು ಉಪಾಧ್ಯಕ್ಷರಾಗುವುದು ನಿಶ್ಚಿತ ಎಂಬ ಮಾತು ಕೇಳಿ ಬಂದಿದೆ. ಇವರ ಬೆಂಬಲ ಪಡೆಯುವವರು ಅಧ್ಯಕ್ಷರಾಗುವುದು ಖಚಿತವಾಗಿದೆ.
ಮತ್ತೇ ರೇಸ್ ನಲ್ಲಿ ಸರನಾಯಕ..?
ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಹುದ್ದೆಗೆ ಅಜಯಕುಮಾರ ಸರನಾಯಕ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕಳೆದ ಅವಧಿಯಲ್ಲೂ ಅಧ್ಯಕ್ಷರಾಗಿದ್ದ ಅವರು ಈ ಬಾರಿ ಕಾಂಗ್ರೆಸ್ಸಿನ ಒಮ್ಮತದ ಅಭ್ಯರ್ಥಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಬಾರಿ ಆಕಾಂಕ್ಷಿಯಾಗಿಯಾಗಿದ್ದ ವಿಜಯಾನಂದ ಕಾಶಪ್ಪನವರ ಈ ಬಾರಿ ಅದಕ್ಕಾಗಿ ಪಟ್ಟು ಹಿಡಿಯುವ ಸಾಧ್ಯತೆಗಳು ಕಡಿಮೆ ಇದ್ದರೂ ಸಹ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದಿದ್ದಾರೆ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ಸ್ಪರ್ಧಿಯಾಗುವ ಬಗ್ಗೆ ಕಾಯ್ದು ನೋಡುವ ತಂತ್ರ ಅನುಸರಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ಸಿನ ೬ ಸದಸ್ಯರು, ಇಬ್ಬರು ಬಂಡುಕೋರ ಅಭ್ಯರ್ಥಿಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ. ಬಾದಾಮಿ ಪಿಕೆಪಿಎಸ್ ಕ್ಷೇತ್ರದಿಂದ ಕುಮಾರಗೌಡ ಜನಾಲಿ ಗೆದ್ದು ಬಂದಿದ್ದು, ಕಳೆದ ಅವಧಿಯಿಂದ ಅವರು ಸರನಾಯಕರಿಗೆ ಆಪ್ತರಾಗಿರುವುದರಿಂದ ಈ ಬಾರಿ ಕೂಡ ಅವರನ್ನೇ ಬೆಂಬಲಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತ್ತಿಲ್ಲ. ಆದರೆ ಅವರನ್ನು ಬೆಂಬಲಿಸಿರುವ ಬಿಜೆಪಿ ಪ್ರಮುಖರು ಡಿಸಿಸಿ ಬ್ಯಾಂಕ್‌ನಲ್ಲಿ ಹಿಡಿತ ಸಾಧಿಸುವ ಅಪೇಕ್ಷೆ ಹೊಂದಿದರೆ ಮಾತ್ರ ಜನಾಲಿ ಅವರ ನಡೆ ಬದಲಾಗುವ ಸಾಧ್ಯತೆಯಿದೆ. ಮುರುಗೇಶ ಕಡ್ಲಿಮಟ್ಟಿ ಕಾಂಗ್ರೆಸ್‌ನಿAದ ಗುರುತಿಸಿಕೊಂಡವರು ಅವರು ಸ್ಪರ್ಧೆಗಿಳಿದಾಗ ತಟಸ್ಥ ನಿಲುವು ಅನುಸರಿಸಿದ ಹಿರಿಯರು ಅಪರೋಕ್ಷವಾಗಿ ಅವರಿಗಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇವರು ನೀಡುವ ಮಾರ್ಗದರ್ಶನ ಕಡ್ಲಿಮಟ್ಟಿ ಅವರ ನಿಲುವಿಗೆ ಕಾರಣವಾಗುತ್ತದೆ. ಆದರೆ ಉಪಾಧ್ಯಕ್ಷ ಸ್ಥಾನ ಅವರಿಗೆ ದೊರೆಯದಿದ್ದರೆ ಅವರೂ ತಮ್ಮ ನಿಲುವನ್ನು ಬದಲಿಸುವ ಸಾಧ್ಯತೆ ಇರುತ್ತದೆ.
ಬಿಜೆಪಿ ಯತ್ನಿಸಿದರೆ ಸಾಹುಕಾರಗಳಿಗೆ ಪಟ್ಟ..?
ಬಿಜೆಪಿ ೫ ಸದಸ್ಯರನ್ನು ಹೊಂದಿದ್ದು, ನಾಮಕರಣಗೊಳ್ಳುವ ಉಪನಿಬಂಧಕರು, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಬೆಂಬಲಿಸಿದರೂ ಸಹ ಬಂಡಾಯ ಅಭ್ಯರ್ಥಿಯೊಬ್ಬರನ್ನು ಸೆಳೆಯಲೇಬೇಕಾಗಿದೆ. ಹೀಗಾಗಿ ಬಿಜೆಪಿ ನಿಲುವು ಯಾವ ರೀತಿ ಆಗುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಸ್ಪರ್ಧೆಗಿಳಿಯದೆ ಮೌನಕ್ಕೆ ಶರಣಾದರೂ ಆಶ್ಚರ್ಯವಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಉಂಟಾದರೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ರಾಮಣ್ಣ ತಳೇವಾಡ ಅವರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ ಪ್ರಕಾಶ ತಪಶೆಟ್ಟಿ ಅವರ ನಡೆ ಕೂಡ ಮಹತ್ವದಾಗಲಿದ್ದು, ಪಕ್ಷದ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಿರ್ಧಾರವಾಗುವುದೋ ಅಥವಾ ನಿರ್ದೇಶಕರೇ ತಮ್ಮಲ್ಲಿ ಒಂದಾಗಿ ಅವಿರೋಧ ಆಯ್ಕೆಗೆ ಮುಂದಾಗುವರೋ ಎಂಬುದು ಇನ್ನೂ ನಿಗೂಢ.