ಚರಂಡಿಯಲ್ಲಿ ನವಜಾತ ಶಿಶುವಿನ ಶವಪತ್ತೆ...!
(ಚಿತ್ರ ಶೀರ್ಷಿಕೆ: ನವಜಾತ ಶಿಶುಪತ್ತೆಯಾದ ಸ್ಥಳದಲ್ಲಿ ಜನ ಜಮಾಯಿಸಿರುವುದು)
ಬಾಗಲಕೋಟೆ: ನಗರದ ಶಿರೂರು ಅಗಸಿ ಬಳಿಯ ದೊಡ್ಡ ಸಾಬಣ್ಣನ ಓಣಿಯ ಮಹಿಳಾ ಶೌಚಗೃಹದ ಬಳಿ ಹಾದುಹೋಗಿರುವ ಬೃಹತ್ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ಗಂಡು ಮಗುವಿನ ಶವ ಇದಾಗಿದ್ದು, ಚರಂಡಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ದೇಹವನ್ನು ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ. ಮೃತದೇಹ ಇರುವುದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ನಂತರ ಶಹರ ಠಾಣೆ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗುರುನಾಥ ಚವಾಣ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ.
ಈ ಹಿಂದೆಯೂ ಕಸದ ರಾಶಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹೆರಿಗೆ ಸಂದರ್ಭದಲ್ಲಿ ಮಗು ಮೃತಪಟ್ಟರೆ ಅದನ್ನು ಸರಿಯಾಗಿ ಅಂತ್ಯಸAಸ್ಕಾರ ಮಾಡುವ ಇಲ್ಲವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ ಅದನ್ನು ನಿರ್ಲಕ್ಷಿಸಿ ಶವವನ್ನು ಬಿಸಾಕಿ ಹೋಗಲಾಗಿದೆ ಎಂದು ಹೇಳಲಾಗಿದೆ.