ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಕಸರತ್ತು

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನವೆಂಬರ ೫ ರಂದು ನಡೆಯಲಿರುವ ಚುನಾವಣೆಗಾಗಿ ತೆರೆಮರೆಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಶೀಲಿಸಿದ್ದು ಅಭ್ಯರ್ಥಿಗಳ ಆಯ್ಕೆಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. 

ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಕಸರತ್ತು

 
ಬಾಗಲಕೋಟೆ ಅ.೮: 
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನವೆಂಬರ ೫ ರಂದು ನಡೆಯಲಿರುವ ಚುನಾವಣೆಗಾಗಿ ತೆರೆಮರೆಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಶೀಲಿಸಿದ್ದು ಅಭ್ಯರ್ಥಿಗಳ ಆಯ್ಕೆಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. 
 ಪಿಕೆಪಿಎಸ್ ಕ್ಷೇತ್ರಗಳಿಂದ ಅವಿರೋಧ ಆಯ್ಕೆಯ ಪ್ರಯತ್ನ ನಡೆದಿದ್ದರೆ ಉಳಿದ ಕ್ಷೇತ್ರಗಳಲ್ಲಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಬಾದಾಮಿ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸುವ ವದಂತಿಗೆ ಲೋಕಸಭೆ ಸದಸ್ಯ ಪಿ.ಸಿ.ಗದ್ದಿಗೌಡರು ತೆರೆ ಎಳೆದಿದ್ದು ಅವರು ಸ್ಪರ್ಧಿಸುವದಿಲ್ಲ ಎಂದು ಬದಾಮಿ ಬಿಜೆಪಿ ಘಟಕ ತಿಳಿಸಿದೆ.
 ಟಿಎಪಿಸಿಎಂಎಸ್ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಕಾಂಗ್ರೆಸ್‌ನಲ್ಲಿ ಲಾಬಿ ನಡೆದಿದೆ. ಆರು ಟಿಎಪಿಸಿಎಂಎಸ್ ಸದಸ್ಯ ಬಲ ಇದ್ದು ನಾಲ್ಕು ಟಿಎಪಿಸಿಎಂಎಸ್ ಕಾಂಗ್ರೆಸ್ ವಶದಲ್ಲಿವೆ. ಇಲ್ಲಿ ಬಾದಾಮಿಯ ಸುಭಾಸ ಮೆಳ್ಳಿ, ಮುಧೋಳದ ನಂದು ಪಾಟೀಲ, ಪ್ರವೇಶಕ್ಕೆ ಪ್ರಯತ್ನ ನಡೆದಿದೆ. ಮುಧೋಳ ವಿಧಾನಸಭೆ ಮೀಸಲು ಕ್ಷೇತ್ರವಾಗಿದ್ದು ರಾಜಕೀಯ ಪ್ರಾತಿನಿಧ್ಯಕ್ಕೆ ನಮಗೆ ಅವಕಾಶ ಇಲ್ಲದ ಕಾರಣ ಇಲ್ಲಿಯಾದರೂ ನಮಗೆ ಅವಕಾಶ ಕೊಡಿ ಎಂದು ನಂದು ಪಾಟೀಲ ವರಿಷ್ಟರಿಗೆ ದುಂಬಾಲು ಬಿದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಹೊಣೆಯನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಸಚಿವ ಮೇಟಿ ಅವರಿಗೆ ವಹಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು. 
 ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಪುನರಾಯ್ಕೆ ಕೋರಲು ಮುಂದಾಗಿದ್ದಾರೆ ಆದರೆ ನಮಗೂ ಒಮ್ಮೆ ಅವಕಾಶ ಕೊಡಿ ಎಂದು ಬಿಜೆಪಿಯ ಜಿಲ್ಲಾ ಪಂಚಾಯತ ಸದಸ್ಯ ಹುನ್ನೂರಿನ ಬಸವರಾಜ ಸಿದ್ದಗೊಂಡ ಬಿರಾದಾರ ಅವರು ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದು ಇತ್ಯರ್ಥವಾಗಬೇಕಿದೆ. ನೇಕಾರರ ಕ್ಷೇತ್ರದಲ್ಲಿ ಅವಕಾಶಕ್ಕಗಾಇ ಕಾಂಗ್ರೆಸ್‌ನಿAದ ಮುರಗೇಶ ಕಡ್ಲಿಮಟ್ಟಿ, ರವೀಂದ್ರ ಕಲಬುರ್ಗಿ ಅವರೂ ಪ್ರಯತ್ನ ನಡೆಸಿದ್ದಾರೆ ಡಾ.ದಡ್ಡೇಣ್ಣವರ ಪುನರಾಯ್ಕೆಗೆ ಕೋರುವ ಸಿದ್ದತೆಯಲ್ಲಿದ್ದಾರೆ. ಉಣ್ಣೆ ನೇಕಾರರ ಸಂಘ ಇದೇ ಮೊದಲ ಬಾರಿಗೆ ರಚನೆಯಾಗಿದ್ದು ಮಾಜಿ ಸಚಿವ ಎಚ್.ವೈ.ಮೇಟಿ ಅವರು ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.