ಬಾಗಲಕೋಟೆಯಲ್ಲೇ ಜೀವಂತ ಸಮಾಧಿಯಾದ ರಘವೀರರು- ಮಂತ್ರಾಲಯದಂತೆ ಪವಾಡ ಮಾಡುತ್ತಿರುವ ಯತಿಗಳ ಇತಿಹಾಸ ಓದಿ

ಬಾಗಲಕೋಟೆಯಲ್ಲೇ ಜೀವಂತ ಸಮಾಧಿಯಾದ ರಘವೀರರು- ಮಂತ್ರಾಲಯದಂತೆ ಪವಾಡ ಮಾಡುತ್ತಿರುವ ಯತಿಗಳ ಇತಿಹಾಸ ಓದಿ

          
ಬಾಗಲಕೋಟೆ: 
ಮುಳಗಡೆ ಬಾಗಲಕೋಟೆ ಹಲವು ಸಂಸ್ಕೃತಿಗಳನ್ನು, ಇತಿಹಾಸವನ್ನು, ಪ್ರಾತಃಸ್ಮರಣೀಯರನ್ನು ಹೊಂದಿರುವ ಪುಣ್ಯ ಭೂಮಿ. ೧೭ನೇ ಶತತಮಾನಕ್ಕೆ ಸೇರಿದ ಶ್ರೀ ರಘುವೀರ ಸ್ವಾಮಿಗಳ ಪುಣ್ಯಸ್ಥಳವಿದು. ಪಂಡಿತ ರುಕ್ಮಾಂಗದರ ಸಮಕಾಲೀನರು(ಕ್ರಿ.ಶ೧೬೧೦ರಿಂದ ೧೭೧೦) ಶಂಕರ ಮಠದ ಪರಂಪರೆಯ ಶ್ರೀ ಗೌರಾನಂದ ಯತಿಗಳಿಂದ ಈರ್ವರೂ ಸನ್ಯಾಸ ಧಿಕ್ಷೆ ಸ್ವೀಕರಿಸಿವದರು. ಶಿವಾಜಿ ಮಹಾರಾಜರ ರಾಜಗುರುಗಳಾಗಿದ್ದ ಶ್ರೀ ಸಮರ್ಥ ರಾಮದಾಸರು ರಘುವೀರರ ಗುರುಗಳಾಗಿದ್ದರು ಎಂಬುದು ಪ್ರತೀತಿ.
 ರುಕ್ಮಾಂಗ ಪಂಡಿತರು, ರಘುವೀರರ ಸ್ನೇಹ ಅನನ್ಯವಾದದ್ದು ಸಾಕ್ಷಿಯಾಗಿ ಜೋಡಿ ಹನುಮಂತ ದೇವರನ್ನು ನಿರ್ಮಿಸಿದ್ದರು. ಕಾರಣಾಂತರದಿಂದ ರಘುವೀರರು ಬಾಗಲಕೋಟೆಗೆ ಬರುವಾಗ ಮೂರ್ತಿಗಳನ್ನು ಬೇರ್ಪಡಿಸಲಾಯಿತು ಎಂದು ಹೇಳಲಾಗಿದ್ದು ಒಂದು ದೇವರ ಮೂರ್ತಿ ರಘುವೀರರ ಸಮಾಧಿ ಮೇಲೆ ಇನ್ನೊಂದು ರುಕ್ಮಾಂಗ ಪಂಡಿತರ ಸಮಾಧಿ ಮೇಲೆ ಇದೆ ಎಂದು ಹೇಳಲಾಗುತ್ತದೆ. 

(ರಘುವೀರರ ಬೃಂದಾವನವಿರುವ ಮಾರವಾಡಿಗಲ್ಲಿಯಲ್ಲಿನ ಮನೆ)

ರಘುವೀರರ ಪವಾಡ ಅನನ್ಯವಾದದ್ದು ಬ್ರಾಹ್ಮಣರ ಊಟಕ್ಕೆ ತುಪ್ಪದ ಕೊರತೆಯಾದಾಗ ಶ್ರೀಗಳು ಅಲ್ಲಿಯ ಬಾವಿಯಿಂದ ಎರಡು ಕೊಡ ನೀರು ತರಿಸಿ ಇಟ್ಟಾಗ ಅದು ತುಪ್ಪವಾಯಿತಂತೆ. ಈಗಲೂ ಅದಕ್ಕೆ ತುಪ್ಪದ ಬಾವಿ ಎಂದು ಕರೆಯುತ್ತಾರೆ. ಆದರೆ ಅದು ಈಗ ಸಂಪೂರ್ಣ ಮುಚ್ಚಿ ಹೋಗಿದೆ. 
 ಬಾಗಲಕೋಟೆ ಮಾರವಾಡಿ ಗಲ್ಲಿಯಲ್ಲಿರುವ ಮನೆಯಲ್ಲಿ ಶ್ರೀ ರಘುವೀರರು ಸಜೀವವಾಗಿ ವೃಂದಾವನಸ್ಥರಾಗಿದ್ದು  ಅವರ ಮನೆಯಲ್ಲಿ ಈಗಲೂ ಸಮಾಧಿ ಸ್ಥಳವನ್ನು ನೋಡಬಹುದಾಗಿದೆ. ಇದರ ಮೇಲೆ ಕಪ್ಪು ಶಿಲೆಯಲ್ಲಿರುವ ಸುಂದರವಾದ ಆಂಜನೇಯ ಸ್ವಾಮಿಯ ಮೂರ್ತಿ, ಸುತ್ತಲೂ ಕಲಾತ್ಮಕ ಪ್ರಭಾವಳಿ, ದೇವ ನಾಗರಿ ಲಿಪಿಯಲ್ಲಿ ಶ್ರೀರಾಮ ಜಯರಾಮ ಜಯ ಜಯ ರಾಮ ಎಂದು ಕೆತ್ತಲಾಗಿದೆ. ಸಮಾಧಿ ಹೊರಗಡೆ ಹುಡೇದ  ಲಕ್ಷ್ಮೀಗುಡಿ ಇದ್ದು ಹಿತ್ತಾಳೆಯ ಕೊಡದಲ್ಲಿ ಒಡಮೂಡಿರುವವಳು ಎಂದು ನಂಬಲಾಗಿದೆ. 

(ರಘುವೀರರ ಬೃಂದಾವನ‌ ಸ್ಥಳ)
 ಶ್ರೀ ಮಠದಲ್ಲಿ ರಘುವೀರರು ಪೂಜಿಸಿದ ಲಕ್ಷ್ಮೀ ವೆಂಕಟೇಶ ಪ್ರತಿಮೆಗಳಿದ್ದು ಇಂದಿಗೂ ತೊಟ್ಟಿಲು ಸೇವೆ ನಡೆಯುತ್ತದೆ. ಅದಕ್ಕಾಗಿ ನಾಲ್ಕು ಚಿಕ್ಕ ತೊಟ್ಟಿಲುಗಳು, ಕುಂಚಿಗೆ, ನಂದಾ ದೀಪದ ಕೋಲುಗಳು, ಯೋಗ ದಂಡಕ್ಕೆ ಹಿತ್ತಾಳೆಯ ಹಿಲಾಲುಗಳು, ರಘುವೀರರ ಪಾದುಕೆಗಳಿದ್ದು ಅವುಗಳಿಗೆ ಬೆಳ್ಳಿಯ ಕಟ್ಟನ್ನು ಹಾಕಲಾಗಿದೆ. ಇವರ ಜನನ ಕಾಲ, ಪೂರ್ವಜರು, ತಂದೆ ತಾಯಿಗಳ ಬಗ್ಗೆ ನಿಖರವಾದ ದಾಖಲೆ ಇಲ್ಲ ಆದರೆ ವಂಶಜರ ಹೇಳಿಕೆ ಪ್ರಕಾರ ಮಹಾರಾಷ್ಟçದ ಪೈಠಣ್ ಪ್ರಾಂತ್ಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ. ೬೪ ಸಂವತ್ಸರಗಳಷ್ಟು ತುಂಬು ಜೀವನವನ್ನು ನಡೆಸಿದ ಶ್ರೀಗಳು ಮಾಘ ಮಾಸ ಶುದ್ದ ಏಕಾದಶಿ ದಿನದಂದು ವೃಂದಾವನಸ್ಥರಾದರು ಕಾರಣ ಮಾಘಮಾಸದ ಶುಕ್ಲಪಕ್ಷದಲ್ಲಿ ದಶಮಿ, ಏಕಾದಶಿ, ದ್ವಾದಶಿಯಂದು ಆರಾಧನೆ ಆಚರಿಸಲಾಗುತ್ತದೆ. ಬಲರಾಮಸ್ವಾಮಿ ರಘುವೀರ, ಕೃಷ್ಣ ರಘುವೀರ, ರಾಮಚಂದ್ರಸ್ವಾಮಿ ರಘುವೀರ ಅವರುಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. 
 ವಿವಾಹ ಅಪೇಕ್ಷೆವುಳ್ಳ ಯುವಕ ಯುವತಿಯರು ಶ್ರೀಗಳ ವೃಂದಾವನಕ್ಕೆ ಅಮಾವಾಸ್ಯೆ ದಿನ ಪೂಜೆ ಸಲ್ಲಿಸಿ ಮನದ ಆಸೆ ಈಡೇರಿಸಿಕೊಂಡಿರುವ ಉದಾಹರಣೆ ಇದ್ದು ಹಲವು ದಂಪತಿಗಳಿಗೆ ಸಂತಾನ ಭಾಗ್ಯ ಕೂಡ ದೊರೆತಿದೆ ಎಂದು ಹೇಳಲಾಗುತ್ತಿದೆ. 
| ಸುರೇಖಾ ಕೊರ್ಲಹಳ್ಳಿ
ಪಿಎಚ್‌ಡಿ ಸಂಶೋರ್ಧನಾರ್ತಿ ಕನ್ನಡ ವಿಶ್ವವಿದ್ಯಾಲಯ ಹಂಪಿ