ಬುರಖಾ ಧರಿಸಿ ಬಂದರು: ನಕಲಿ ಆಭರಣ ಕೊಟ್ಟು ಅಸಲಿ ಚಿನ್ನ ಎಗರಿಸಿದರು...!
ನಾಡನುಡಿ ನ್ಯೂಸ್
ಬಾಗಲಕೋಟೆ:
ಬುರಖಾ ಧರಿಸಿ ಬಂದು ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಎಗರಿಸಿದ್ದ ಖತರನಾಕ ಕಳ್ಳಿಯರನ್ನು ಬಂಧಿಸುವಲ್ಲಿ ಇಳಕಲ್ ಠಾಣೆ ಪೂಲೀಸರು ಯಶಸ್ವಿಯಾಗಿದ್ದಾರೆ.
ಇಳಕಲ್ಲಿನ ಗಾಂಧಿ ಚೌಕ ವ್ಯಾಪಾರಸ್ಥ ಹರೀಶ ವರ್ಣೆಕರ ಅವರ ಚಿನ್ನದ ಅಂಗಡಿಗೆ ಆಗಮಿಸಿದ್ದ ಇಬ್ಬರು ಬುರಖಾಧಾರಿ ಮಹಿಳೆಯರು ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಅಂಗಡಿ ಮಾಲೀಕನಿಂದ 1.86 ಲಕ್ಷ ಮೌಲ್ಯದ 36.450 ಗ್ರಾಂ ಚಿನ್ನವನ್ನು ಎಗರಿಸಿದ್ದರು.
ನಂತರ ಅವರು ನೀಡಿದ್ದ ನಕಲಿ ಚಿನ್ನ ಎಂಬುದು ವ್ಯಾಪಾರಸ್ಥನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.
ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ತನಿಖೆಗೆ ಇಳಿದ ಸಿಪಿಐ ಕೆ.ಹೊಸಕೇರಪ್ಪ ನೇತೃತ್ವದ ತಂಡ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕನಕಾನಗರದ ಪ್ರದೇಶದ ರೆಹನಾಬೇಗಮ ಸೈಯ್ಯದ ಅಪ್ಸರ್(೪೫), ವಿಮಾನಪುರದ ಮೆಹರಜಾನ್ ಸೈಯ್ಯದ ಆಸೀಫ್(೪೦) ಬಂಧಿತ ಆರೋಪಿಗಳು.
ಇವರು ಹೊಸಪೇಟೆ ನಗರದ ರೇಣುಕಾ ಜ್ಯುವೆಲರಿ ಮಳಿಗೆಯಲ್ಲೂ ಇದೇ ರೀತಿಯ ಮೋಸ ಮಾಡಿ 1.04 ಲಕ್ಷ ರೂ.ಮೌಲ್ಯದ 36,970 ಗ್ರಾಂ ಚಿನ್ನವನ್ನು ಎಗರಿಸಿದ್ದರು.
ಇಳಕಲ್ ಪಿಎಸ್ಐ ಶಿವಾನಂದ ನಾಯಕವಾಡಿ, ಸಿಬ್ಬಂದಿಗಳಾದ ಆನಂದ ಗೋಲಪ್ಪನವರ, ಗಣೇಶ ಪವಾರ, ರಜಾಕ್ ಗುಡದಾರಿ, ಮಹಾಂತೇಶ ದೊಡ್ಡಮನಿ, ನಾಗೇಶ ರಾಠೋಡ, ಶೋಭಾ ಮೇಟಿ,ಆರ್.ಎಸ್.ಡೋಣಿ, ಸುತಗುಂಡಾರ, ಬಸವರಾಜ ಭಾವಿಕಟ್ಟಿ, ವಿ.ಡಿ.ಗೌಡರ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದು, ಸಿಬ್ಬಂದಿ ಕಾರ್ಯವನ್ನು ಎಸ್ಪಿ ಲೋಕೇಶ ಜಗಲಾಸರ್ ಮುಕ್ತ ಕಂಠದಿಂದ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.