ಕಪ್ಪು ಬಟ್ಟೆ ಕಟ್ಟಿಕೊಂಡು ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಳ್ಳಿ
* ಸಮಾಜದ ನಿರ್ಧಾರ ಪ್ರಕಟಿಸಿದ ಮಾಜಿ ಶಾಸಕ ಕಾಶಪ್ಪನವರ * ಮೀಸಲಾತಿ ಹಕ್ಕೊತ್ತಾಯ ಮಂಡನೆಗೆ ತೀರ್ಮಾನ
ಸಂ.ಕ.ಸಮಾಚಾರ
ಬಾಗಲಕೋಟೆ:
ಸರ್ಕಾರದಿಂದ ಅ.೨೩ರಂದು ಹಮ್ಮಿಕೊಂಡಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವದಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹಾಗೂ ಸಮಗ್ರ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿಗೆ ಆಗ್ರಹಿಸಿ ಕಪ್ಪು ಬಟ್ಟಿ ಕಟ್ಟಿಕೊಂಡು ಭಾಗವಹಿಸುವುದರ ಮೂಲಕ ಹಕ್ಕೊತ್ತಾಯ ಮಂಡಿಸಬೇಕೆಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕರೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಸರ್ಕಾರದಿಂದ ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಬಗ್ಗೆ ಗೊಂದಲಗಳಿದ್ದವು. ಕಿತ್ತೂರು ರಾಣಿ ಚೆನ್ನಮ್ಮ ಭಾರರತದ ಹೆಮ್ಮೆ. ಅವರ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಆದರೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಬಲಗೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರದರ್ಶಿಸಬೇಕೆಂದು ಹೇಳಿದರು.
ಪಂಚಮಸಾಲಿ ಮೀಸಲಾತಿಗಾಗಿ ಅ.೨೩ರ ಗಡುವು ನೀಡಲಾಗಿದೆ. ಅಷ್ಟರೊಳಗಾಗಿ ಹಿಂದುಳಿದ ವರ್ಗದ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಾವು ನೀಡಿದ ಗಡುವಿಗೆ ಸರ್ಕಾರ ತಲೆ ಕೆಡಿಸಿಕೊಳ್ಳದಿದ್ದರೆ ನವೆಂಬರ್ ತಿಂಗಳಿನಲ್ಲಿ ೨೫ ಲಕ್ಷ ಜನರನ್ನು ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯತ್ನಾಳ ನಿರ್ಲಕ್ಷಿಸಿದರೆ ಹುಷಾರ್:
ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಯಕರಲ್ಲ ಎಂಬ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಹೇಳಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಉಸ್ತುವಾರಿ ಹೇಳಿಕೆ ಮೇಲೆ ಅವರು ನಾಯಕರು ಹೌದೋ, ಇಲ್ಲವೋ ಎಂಬುದು ನಿರ್ಧಾರವಾಗುವುದಿಲ್ಲ. ಯತ್ನಾಳ ಒಬ್ಬ ರಾಷ್ಟ್ರೀಯ ನಾಯಕರು. ಪಂಚಮಸಾಲಿ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಿದರೆ ಸಮಾಜ ತಕ್ಕ ಉತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
ಮೀಸಲಾತಿ ನೀಡುವುದಾಗಿ ಹೇಳಿ ಬಿ.ಎಸ್.ಯಡಿಯೂರಪ್ಪನವರು ಮಾತುತಪ್ಪಿದಾಗ ಸದನದಲ್ಲೇ ಯತ್ನಾಳ ಪ್ರಶ್ನಿಸಿದ್ದಾರೆ. ನಮಗೆ ಅಧಿಕಾರಕ್ಕಿಂತಲೂ ಸಮಾಜ ಮುಖ್ಯ. ಸಮಾಜಕ್ಕೆ ನ್ಯಾಯ ಒದಗಿಸುವುದಕ್ಕಾಗಿ ನಾವುಗಳು ಅಧಿಕಾರ ತ್ಯಜಿಸುವುದಕ್ಕೂ ಸಿದ್ಧರಿದ್ದೇವೆ. ಮೀಸಲಾತಿ ಹೋರಾಟ ಸಂಪೂರ್ಣ ಪಕ್ಷಾತೀತವಾಗಿದೆ ಎಂದರು.
ಕಾರಜೋಳ ಹೇಳಿಕೆಗೆ ತಿರುಗೇಟು:
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಭಾರತ ಜೋಡೋ ಯಾತ್ರೆ ಕುರಿತು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ. ನಂದವಾಡಗಿ ಏತನೀರಾವರಿ ಯೋಜನೆ ಬಾಕಿಯಿದೆ. ಅದನ್ನು ಪೂರ್ಣಗೊಳಿಸಿ ತೋರಿಸಲಿ ಎಂದು ಸವಾಲಾಕಿದರು.
ಡಿಸಿಸಿ ಬ್ಯಾಂಕ್ ಹಗರಣಗಳನ್ನು ಹೊರತೆಗೆಯುವುದಾಗಿ ಹಿಂದೆ ನೀಡಿದ್ದ ಹೇಳಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಳ್ಳರು ಸುಲಭವಾಗಿ ಸಿಗುವುದಿಲ್ಲ. ಪೊಲೀಸರು ಅದಕ್ಕಾಗಿ ತನಿಖೆ ಕೈಗೊಳ್ಳಬೇಕಾಗುತ್ತದೆ. ನಾನು ಕೂಡ ತನಿಖೆಯಲ್ಲಿದ್ದೇನೆ. ಸಿಕ್ಕಿಬಿದ್ದ ನಂತರ ಮಾಧ್ಯಮಗಳ ಎದುರು ಮಾತನಾಡುತ್ತೇನೆ ಎಂದರು.