ಸೆಮಿ ಲಾಕ್ಡೌನ್: ಜಿಲ್ಲೆಯಲ್ಲಿ ಏನಿರುತ್ತೆ...ಏನಿರಲ್ಲ...? ಇಲ್ಲಿದೆ ಓದಿ ಡಿಟೇಲ್ಸ್
ನಾಡನುಡಿ ನ್ಯೂಸ್
ಬಾಗಲಕೋಟೆ:
ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇ 4 ರವರೆಗೆ ಸರಕಾರ ಕಠಿಣ ಕ್ರಮಗಳ ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯಲ್ಲಿ ಮಾರ್ಗಸೂಚಿಗಳ ಕಟ್ಟಿನಿಟ್ಟಿನ ಪಾಲನೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಮೇ 4 ರವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ವರೆಗೆ ರಾತ್ರಿ ಕಪ್ರ್ಯೂ ಜಾರಿಯಲ್ಲಿರುತ್ತದೆ. ಅಲ್ಲದೇ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ವರೆಗೆ ಪೂರ್ತಿಯಾಗಿ ಕಪ್ರ್ಯೂ ಹೇರಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆಯಾಗದಂತೆ ಕ್ರಮಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ರಾತ್ರಿ ಕರ್ಫ್ಯೂ ಸಮಯದಲ್ಲಿ ತುರ್ತು ಸಂಚಾರ ಹೊರತುಪಡಿಸಿ ಉಳಿದ ಎಲ್ಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದಂದು ಪೂರ್ತಿ ಕಪ್ರ್ಯೂ ಇರಲಿದೆ. ಹಗಲು ವೇಳೆಯಲ್ಲಿ ಮಾತ್ರ ಮದುವೆ, ಉಳಿದ ಕಾರ್ಯಕ್ರಮ ಮಾಡಿಕೊಳ್ಳಬಹುದಾಗಿದೆ. ರಾತ್ರಿ ವೇಳೆಯಲ್ಲಿ ಯಾವುದೇ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ. ನ್ಯಾಯಬೆಲೆ ಅಂಗಡಿ, ಆಹಾರ, ಧವಸಧಾನ್ಯ, ಹಣ್ಣು ತರಕಾರಿ, ಹಾಲು ಉತ್ಪನ್ನಗಳಿಗೆ ಅವಕಾಶವಿದ್ದು, ತೆರೆದ ಪ್ರದೇಶಗಳಲ್ಲಿ ಸಗಟು, ತರಕಾರಿ, ಹಣ್ಣು, ಹೂವು ಮಾರಟಕ್ಕೆ ಮಾತ್ರ ಅವಕಾಶ ವಿರುತ್ತದೆ ಎಂದು ತಿಳಿಸಿದರು.
ಮದುವೆ,ಅಂತ್ಯಕ್ರಿಯೆಗೂ ನಿರ್ಬಂಧ:ಸರಕಾರದ ಹೊಸ ಮಾರ್ಗಸೂಚಿಯನ್ವಯ ಮದುವೆಗೆ ಕೇವಲ 50 ಜನ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಗೆ 20 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದ್ದು, ಈ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ನೋಡಲ್ ಅಧಿಕಾರಿಗಳು ಮಾರ್ಗಸೂಚಿ ನಿಯಮ ಪಾಲನೆಗೆ ಕ್ರಮಜರುಗಿಸಬೇಕು. ಪಾಲನೆಯಾಗದಿದ್ದಲ್ಲಿ ದಂಡದ ಜೊತೆ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗಾ ಕೇಂದ್ರ, ಈಜುಗೊಳ, ಸ್ಪೊರ್ಟ್ಸ್ ಕಾಂಪ್ಲೆಕ್ಸ್, ಬಾರ್, ಆಡಿಟೋರಿಯಂ ನಂತಹ ಸ್ಥಳಗಳನ್ನು ತೆರೆಯುವದನ್ನು ನಿಷೇಧಿಸಲಾಗಿದೆ. ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ಸ್ವಿಮ್ಮಿಂಗ್ ಫೂಲ್‍ಗಳನ್ನು ಮಾತ್ರ ತೆರೆಯಲು ಅವಕಾಶ ಅನುಮತಿ ನೀಡಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿರುವ ಹೋಟಲ್ ಮತ್ತು ರೆಸ್ಟೋರೆಂಟ್ ಹಾಗೂ ಬಾರ್, ಎಂಆರ್‍ಪಿಗಳಲ್ಲಿ ಪಾರ್ಸಲ್‍ಗೆ ಅವಕಾಶ ನೀಡಲಾಗಿದೆ. ಲಾಡ್ಜ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆ, ಸಮಾರಂಭ ನಿರ್ಬಂಧ:ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭ ನಡೆಸುವದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿರುವ ಬಾದಾಮಿ ಬನಶಂಕರಿ, ತುಳಸಿಗೇರಿ ಆಂಜನೇಯ, ಮುಚಖಂಡಿ ವೀರಭದ್ರೇಶ್ವರ ಹಾಗೂ ಕೂಡಲಸಂಗಮ ಸಂಗಮೇಶ್ವರ ದೇವಸ್ಥಾನಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ ಮುಚ್ಚಲು ಈಗಾಗಲೇ ಆದೇಶಿಸಲಾಗಿದ್ದು, ಪಾಲನೆಯಾಗುತ್ತಿರುವ ಬಗ್ಗೆ ಆಯಾ ತಾಲೂಕಿನ ತಹಶೀಲ್ದಾರರು ಕ್ರಮವಹಿಸಲು ಸೂಚಿಸಿದರು.
ಶಾಲಾ, ಕಾಲೇಜ ಸಂಪೂರ್ಣ ಬಂದ್:ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಲಾ ಕಾಲೇಜುಗಳನ್ನು ಬಂದ ಮಾಡಲು ತಿಳಿಸಿದ್ದು, ಆನ್‍ಲೈನ್ ಕ್ಲಾಸ್‍ಗೆ ಮಾತ್ರ ಅವಕಾಶ ಕಲ್ಪಿಸಿದೆ ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕ್ರಮವಹಿಸಬೇಕು. ಅಲ್ಲದೇ ಟ್ಯೂಶನ್‍ಗಳನ್ನು ಸಹ ಬಂದ್‍ಗೆ ಕ್ರಮವಹಿಸಬೇಕು. ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ನೀಡಲಾಗಿದೆ. ಜಿಲ್ಲೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧವಿರುವದಿಲ್ಲ. ಸಾರ್ವಜನಿಕ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಜಿಲ್ಲೆಯಲ್ಲಿ ದನ ಸಂತೆ, ಜಾತ್ರೆಗಳನ್ನು ನಡೆಯದಂತೆ ಕ್ರಮವಹಿಸಬೇಕು. ಕಾಯಿಪಲ್ಲೆ ಮಾರ್ಕೇಟ್‍ನಲ್ಲಿ ಜನ ಸಂದನಿಯಾಗದಂತೆ ತರಕಾರಿ ಮತ್ತು ಹಣ್ಣು ಮಾರಾಟ ಪ್ರತ್ಯೇಕವಾಗಿ ಮಾರಾಟವಾಗುವಂತೆ ಕ್ರಮವಹಿಸಿ. ಹಗಲು ಮಾತ್ರ ಮದುವೆ ಕಾರ್ಯಕ್ರಮ ಜರುಗಬೇಕು. ರಾತ್ರಿ ವೇಳೆ ಕಾರ್ಯಕ್ರಮ ನಡೆಸದಂತೆ ಕ್ರಮವಹಿಸಬೇಕು. ವಲಸಿಗರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ಕೇಂದ್ರ ಸ್ಥಾಪಿಸಿ ವಲಸಿಗರ ಮಾಹಿತಿ ಮತ್ತು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಪೌರಾಯುಕ್ತ ಮುನಿಶಾಮಪ್ಪ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ವಿಡಿಯೋ ಕಾನ್ಸರೆನ್ಸ್ ಮೂಲಕ ಪಾಲ್ಗೊಂಡಿದ್ದರು.