ಸಿದ್ದುಗೆ ಸವಾಲುಗಳ ಸುರಿಮಳೆಗೈದ ಕಟೀಲ್
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ನಳಿನಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ:
ಸಿದ್ದರಾಮಯ್ಯ ಮಾತುಗಳೆ ಬಿಜೆಪಿ ಗೆಲುವಿಗೆ ವರದಾನವಾಗುತ್ತಿದ್ದು, ಅವರಿಗೆ ಧೈರ್ಯವಿದ್ದರೆ ಬಾದಾಮಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸವಾಲೆಸೆದಿದ್ದಾರೆ.
ಸೋಮವಾರ ಹೊಸ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಾರಿ ಸಿಎಂ ಆದವರಿಗೆ ತಮ್ಮದೇ ಕ್ಷೇತ್ರದಲ್ಲಿ ನಿಲ್ಲಲು ಸಾಧ್ಯವಾಗಿಲ್ಲ ಎಂದಾದರೆ ಅವರಿಗೆ ಇನ್ನೊಬ್ಬರ ಬಗ್ಗೆ ಮಾತನಾಡಲು ಅಧಿಕಾರವೂ ಇಲ್ಲ. ಧಮ್ ಇದ್ದರೆ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಲಿ, ಇಲ್ಲವೇ ಚಾಮುಂಡಿ ಕ್ಷೇತ್ರಕ್ಕೆ ಬಂದು ನೋಡಲಿ ಎಂದು ಸವಾಲಾಕಿದರು.
ಚಾಮುಂಡಿ, ಬಾದಾಮಿ ಕ್ಷೇತ್ರದ ನಂತರ ಈಗ ಸಿದ್ದರಾಮಯ್ಯ ಕೋಲಾರದ ಕಡೆಗೆ ಮುಖ ಮಾಡಿದ್ದಾರೆ. ಅವರು ಮುತ್ಸದ್ದಿ ರಸಜಕಾರಣಿ ಆಗಿದ್ದರೆ ಕಾಂಗ್ರೆಸ್ ಗೆ ಕಠಿಣ ಸ್ಪರ್ಧೆ ಇರುವ ಕ್ಷೇತ್ರಕ್ಕೆ ತೆರಳಿ ಗೆದ್ದು ತೋರಿಸಲಿ ಎಂದು ಸವಾಲಾಕಿದರು.
ನಿರಂತರವಾಗಿ ಶಿಕಾರಿಪುರದಿಂದ ಸ್ಪರ್ಧಿಸಿ ಗೆದ್ದಿರುವುದು ಬಿ.ಎಸ್.ಯಡಿಯೂರಪ್ಪನವರ ತಾಕತ್ತು. ಕಾಂಗ್ರೆಸ್ ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಎರಡು ಗುಂಪುಗಳಿವೆ ಎಂದು ಗುಡುಗಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಬ್ಬ ಸ್ವಾಭಿಮಾನಿ ನಾಯಕರಾಗಿದ್ದರೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುತ್ತಾರೆ. ಅವರಿಗೆ ಟಿಕೆಟ್ ಸಹ ನೀಡುವುದಿಲ್ಲ ಎಂದರು.