ಸರ್ಕಾರದ ಭವಿಷ್ಯ ನ್ಯಾಯಾಲಯದ ತೀರ್ಮಾನದಲ್ಲಿ ಅಡಕ: ಈಶ್ವರಪ್ಪ 

ಸರ್ಕಾರದ ಭವಿಷ್ಯ ನ್ಯಾಯಾಲಯದ ತೀರ್ಮಾನದಲ್ಲಿ ಅಡಕ: ಈಶ್ವರಪ್ಪ 
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್‌ಐಆರ್ ದಾಖಲಾದರೆ ಸಿಎಂ ಸ್ಥಾನದಲ್ಲಿ ಅವರು ಮುಂದವರಿಯುವುದು ಅನುಮಾನ, ಮುಂದೆ ಸರ್ಕಾರ ಉಳಿಯುವ ಬಗ್ಗೆಯೂ ಖಚಿತತೆ ಇಲ್ಲ ಇದೆಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬನೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ಲೇಷಿಸಿದ್ದಾರೆ. 
ರವಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರದಲ್ಲಿ ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿಸಿದೆ. ನ್ಯಾಯಾಲಯದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ತೀರ್ಪು ಬಂದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಅಥವಾ ಕೊಡಬೇಕಾಗಬಹುದು, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅಪೇಕ್ಷೆಪಡುವ ವ್ಯಕ್ತಿ ಸಿಎಂ ಆಗ್ತಾರಾ, ಅಥವಾ ಅವರ ಬೆಂಬಲಿಗರು ಸಿಎಂ ಆಗುವುದಕ್ಕೆ ಡಿ.ಕೆ.ಶಿವಕುಮಾರ ಹಾಗೂ ಎಂ.ಬಿ.ಪಾಟೀಲ ಅವಕಾಶ ನೀಡದಿದ್ದರೆ ಸರ್ಕಾರ ಎಷ್ಟರ ಮಟ್ಟಿಗೆ ಉಳಿಯುತ್ತದೆ ಎಂಬುದು ನ್ಯಾಯಾಲಯದ ತೀರ್ಮಾನವನ್ನು ಅವಲಂಬಿಸಿದೆ ಎಂದು ವಿಶ್ಲೇಷಿಸಿದರು. ಸಿಎಂಬ ಪರವಾಗಿ ಬೆಂಬಲಕ್ಕೆ ನಿಂತವರಿಗೆ ಸಿಎಂ ಆಗುವ ಹಂಬಲವಿದೆ, ಸಿದ್ದರಾಮಯ್ಯ ಆ ಸ್ಥಾನದಲ್ಲಿ ಉಳಿಯುವುದಿಲ್ಲ ಎಂದು ಕಾಂಗ್ರೆಸ್ಸಿನವರೇ ಅಂದುಕೊ0ಡಿದ್ದಾರೆ ಎಂದು ಆರೋಪಿಸಿದರು. 
ಕೇಂದ್ರದಲ್ಲಿ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಭಾವ ಹೆಚ್ಚುತ್ತಿರುವುದರಿಂದ ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಧರ್ಮ ನಿಷ್ಠರ ಪಕ್ಷವಾಗಿದೆ. ಹಿಂದು ಸಂಸ್ಕೃತಿಯನ್ನು ಉಳಿಸುವ ಏಕಮಾತ್ರ ಪಕ್ಷ ಬಿಜೆಪಿ ಹೀಗಾಗಿ ಯಾವುದೇ ಪಕ್ಷ ಬಿಜೆಪಿಯಲ್ಲಿ ವಿಲೀನದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಗಣೇಶ ಮಂಡಳಿಗಳ ಪ್ರಸಾದ ವಿತರಣೆಗೆ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ ಪಡೆಯಬೇಕೆಂಬ ಸರ್ಕಾರದ ನಿರ್ಧಾರಕ್ಕೂ ಅವರು ಕಿಡಿಕಾರಿದರು. ಇದಕ್ಕೂ ಮುನ್ನ ಪುತ್ರ ಕಾಂತೇಶ ಅವರೊಂದಿಗೆ ಅವರು ಸುಕ್ಷೇತ್ರ ಬನಶಂಕರಿದೇವಿಯ ದರ್ಶನ ಪಡೆದರು.