ರೈತರಿಂದ GO BACK AMIT SHAH ಆಂದೋಲನ
ನಾಡನುಡಿ ನ್ಯೂಸ್
ಬಾಗಲಕೋಟೆ:
ಮುರುಗೇಶ ನಿರಾಣಿ ಸಮೂಹದ ಕೇದಾರನಾಥ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ ಷಾ ವಿರುದ್ಧ "GO BACK AMIT SHAH" ಆಂದೋಲನ ನಡೆಸಲು ರೈತರು ನಿರ್ಧರಿಸಿದ್ದಾರೆ.
ಬಾದಾಮಿ ತಾಲೂಕಿನ ಕೇದಾರನಾಥ ಸಕ್ಕರೆ ಕಾರ್ಖಾನೆಯೂ ಇದೀಗ ನಿರಾಣಿ ಸಮೂಹದ ತೆಕ್ಕೆಗೆ ಸೇರುತ್ತಿದ್ದು, ಈ ಮುಂಚೆ ರೈತರಿಗೆ ನೀಡಬೇಕಾಗಿರುವ ಕೋಟ್ಯಾಂತರ ರೂ.ಗಳನ್ನು ಕಾರ್ಖಾನೆ ಬಾಕಿ ಉಳಿಸಿಕೊಂಡಿದೆ. ಅದನ್ನು ಪಾವತಿಸಿಯೇ ಕಾರ್ಖಾನೆ ಆರಂಭಿಸಬೇಕೆಂಬುದು ರಾಜ್ಯ ಹಸಿರು ಸೇನೆ ಮತ್ತು ರೈತ ಸಂಘದ ಆಗ್ರಹವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಮುಖಂಡರಾದ ತುಕಾರಾಂ ಮ್ಯಾಗಿನಮನಿ ಮತ್ತು ಹಣಮಂತ ಮುಗಳೊಳ್ಳಿ ಅವರು ೨೦೧೦-೧೧ರಲ್ಲಿ ಪೂರೈಸಿದ್ದ ಕಬ್ಬಿನ ೧೪ ಕೋಟಿ ರೂ.ಗಳ ಬಾಕಿ, ಕಟಾವು ಮತ್ತು ಸಾಗಾಣಿಕೆ ಮೊತ್ತ ೬ ಕೋಟಿ ರೂ.ಗಳು, ೩೬ ಕೋಟಿ ರೂ.ಗಳ ಷೇರು ಬಾಕಿಯಿದ್ದು, ಅದನ್ನು ಪಾವತಿಸದಿದ್ದರೆ ಹೋರಾಡ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಈ ಮುಂಚೆ ಯಾವ ರಾಜಕೀಯ ಒತ್ತಡಕ್ಕೂ ಮಣಿಯುವುದಿಲ್ಲ ಎಂದಿದ್ದರು. ನಿರಾಣಿ ಅವರು ಕೇವಲ ೬೦ ಕೋಟಿಗೆ ಖರೀದಿಸಿದ್ದಾರೆ.ನಮ್ಮ ಬಾಕಿ ಅಲ್ಲಿರುವುದರಿಂದ ರೈತರಿಗೆ ಅದನ್ನು ಖರೀದಿ ನೀಡುವಂತೆಯೂ ಆಗ್ರಹಿಸಲಾಗಿತ್ತು ಆಡಳಿತದಿಂದ ನಮಗೆ ಅನ್ಯಾಯ ಆಗಿದೆ ಎಂದರು.
ಜ.೧೭ರಂದು ಅಮಿತ್ ಷಾ ಆಗಮಿಸಿದ ವೇಳೆ ೨ ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ. ಅದರ ನಂತರವೂ ಹೋರಾಟ ಮುಂದವರಿಯಲಿದ್ದು, ಮುರುಗೇಶ ನಿರಾಣಿ ಅವರಿಗೆ ಹಳ್ಳಿ,ಹಳ್ಳಿಗಳಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ವಿರೋಧಕ್ಕೆ ವಿರೋಧ:
ಇನ್ನು ಅಮಿತ್ ಷಾ ಆಗಮನದ ವೇಳೆ ನಡೆಯುವ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದ್ದು, ವಿರೋಧಿಸುತ್ತಿರುವ ರೈತರು ಈ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದವರಲ್ಲ. ಅನೇಕ ವರ್ಷಗಳು ಕನಸು ನನಸಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ವಿರೋಧ ಮಾಡುವುದು ಸರಿಯಲ್ಲ. ಬಾದಾಮಿ ತಾಲೂಕಿನಲ್ಲಿ ಕಾರ್ಖಾನೆಗಳು ಇರಲಿಲ್ಲ. ರೈತರ ಆಶಭಾವೆನೆಗೆ ಕೊಳ್ಳಿ ಇಡುವ ಕೆಲಸ ಮಾಡಬೇಡಿ. ನೀವು ವಿರೋಧಿಸಲು ಮುಂದಾದರೆ ಅದಕ್ಕ ಪ್ರತ್ಯುತ್ತರ ನೀಡುತ್ತೇವೆ. ರೈತ-ರೈತರ ಮಧ್ಯೆ ವಿವಾದ ಬೇಡ. ಎಲ್ಲರೂ ಸೇರಿ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಬಾಕಿ ಮೊತ್ತ ಪಡೆಯೋಣ ಎಂದು ಸುರೇಶ ಪವಾರ ತಿಳಿಸಿದರು.
ಮುರುಗೇಶ ನಿರಾಣಿ ಅವರು ರೈತ ಪರವಾಗಿದ್ದು, ಬಾಕಿ ಅವರಿಗೆ ಸಂಬಂಧಿಸಿಲ್ಲ. ಅದು ಸರ್ಕಾರಕ್ಕೆ ಸಂಬಂಧಿಸಿದಾಗಿದ್ದು, ಎಲ್ಲರೂ ಸೇರಿ ಬಾಕಿಗಾಗಿ ಪ್ರಯತ್ನಿಸೋಣ ಎಂದು ಹೇಳಿದರು.