ವಾಂಬೆ ಕಾಲೋನಿ ಗಲಾಟೆ : ಕ್ರಮಕ್ಕೆ ಶಾಸಕ ಮೇಟಿ ಸೂಚನೆ
ಬಾಗಲಕೋಟೆ : ನವನಗರದ ವಾಂಬೆ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು *ಶಾಸಕ ಎಚ್.ವೈ. ಮೇಟಿ* ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ ಪ್ರಶಾಂತ ಮನ್ನೊಳ್ಳಿ ಜತೆಗೆ ಮಾತನಾಡಿದ್ದೇನೆ. ಘಟನೆಗೆ ಯಾರೇ ಕಾರಣರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿರುವೆ ಎಂದು ಹೇಳಿದ್ದಾರೆ.
*ಸೌಹಾರ್ಧತೆಗೆ ಧಕ್ಕೆ ತರಬೇಡಿ :*
ನಗರದಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಎಲ್ಲ ವಿದ್ಯಮಾನ, ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ. ವೈಯಕ್ತಿಕ ಜಗಳಗಳನ್ನು ತಂದು, ಹಿಂದೂ-ಮುಸ್ಲಿಂ ಸಮುದಾಯಕ್ಕೆ ಥಳಕು ಹಾಕಿ, ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ನಡೆದಿವೆ. ಇಂತಹ ಕ್ಷುಲಕ ಮನಸ್ಥಿತಿಯ ಮತ್ತು ಗಲಾಟೆಗಳಿಗೆ ಪ್ರಚೋದನೆ ನೀಡುವ ವ್ಯಕ್ತಿಗಳನ್ನೂ ಪತ್ತೆ ಮಾಡಿ, ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧವಿದೆ. ಪೊಲೀಸರು, ಕಾನೂನು ರೀತಿ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಶಾಂತಿ- ಸೌಹಾರ್ದತೆ ಕದಡುವ, ಸಮಾಜದಲ್ಲಿ ಸ್ವಾಸ್ತ್ಯ ಹಾಳುವ ಮಾಡುವ ಯಾವುದೇ ಕೋಮಿನ ವ್ಯಕ್ತಿಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕಠೀಣ ಕ್ರಮ ಕೈಗೊಳ್ಳಲು ನಮ್ಮ ಸಂಪೂರ್ಣ ಸಹಕಾರ-ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂರು ಸೌಹಾರ್ದತೆ ಹಾಗೂ ಸಹೋದರರಂತೆ ಬಾಳಬೇಕು ಎಂಬುದು ನನ್ನ ಗುರಿ. ಈ ಸಮುದಾಯಗಳ ಮಧ್ಯೆ ಬಿರುಕು ತಂದು, ನಗರದ ಜನರ ನೆಮ್ಮದಿ ಹಾಳುವ ಉದ್ದೇಶವನ್ನು ಕೆಲವರು ಹೊಂದಿದ್ದಾರೆ. ಇಂತಹ ಶಾಂತಿ ಕದಡುವ ವ್ಯಕ್ತಿಗಳ ಮಾತಿಗೆ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ವಾಂಬೆ ಕಾಲೋನಿಯಲ್ಲಿ ನಿನ್ನೆಯ ಘಟನೆ ಹೇಗಾಯಿತು, ಯಾರು ಕಾರಣ ಎಂಬುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾವುದೇ ವದಂತಿಗೆ ಜನರು ಕಿವಿಗೊಡಬಾರದು. ಈ ಘಟನೆಯ ಕುರಿತು ನಾನೂ ಸೂಕ್ಷ್ಮವಾಗಿ ಗಮನಿಸುತ್ತಿರುವೆ. ಮತೀಯ ಗಲಭೆ ಸೃಷ್ಟಿಸಿದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ಶಾಸಕ ಮೇಟಿ ಎಚ್ಚರಿಕೆ ನೀಡಿದ್ದಾರೆ.