೧೦೦ನೇ ರ‍್ಯಾಂಕ್ ಪಡೆದ ಕುವರಿ ಬಾಗಲಕೋಟೆಯ ಬಿಪ್ಸ್ ವಿದ್ಯಾರ್ಥಿನಿ
ಬಾಗಲಕೋಟೆ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ೧೦೦ನೇ ರ‍್ಯಾಂಕ್ ಪಡೆದು ಇಡೀ ಕರುನಾಡು ಹೆಮ್ಮೆ ಪಡುವಂತೆ ಮಾಡಿರುವ ವಿಜೇತಾ ಭೀಮರಾಯ ಹೊಸಮನಿ ಮೂಲತಃ ವಿಜಯಪುರದ ಕುವರಿ.
ಸದ್ಯ ಹುಬ್ಬಳ್ಳಿಯಲ್ಲಿ ವಾಸಿಸುತ್ತಿರುವ ವಿಜೇತಾ ಅವರ ತಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉದ್ಯೋಗಿ. ಬಾಗಲಕೋಟೆಯ ಬವಿವ ಸಂಘದ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ(ಬಿಪ್ಸ್)ಯಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿ ವ್ಯಾಸಂಗ ಮಾಡಿರುವ ವಿಜೇತಾ ಶಾಲಾ ದಿನಗಳಲ್ಲೇ ವಿದ್ಯಾಭ್ಯಾಸದಲ್ಲಿ ಮುಂದಿದ್ದರು. ಶಿಕ್ಷಕರ ನೆಚ್ಚಿನ ವಿದ್ಯಾರ್ಥಿ ಎನಿಸಿಕೊಂಡಿದ್ದರು.
ವಿಜೇತಾ ಸಾಧನೆ ಕುರಿತು ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಬಿಪ್ಸ್ ಪ್ರಾಂಶುಪಾಲ ಸಿ.ಬಿ.ಸುರೇಶ ಹೆಗ್ಡೆ ಅವರು, ೬ನೇ ತರಗತಿಗೆ ವಿಜೇತಾ ಪ್ರವೇಶ ಪಡೆದು ಬಂದಾಗ ಅತ್ಯಂತ ಸಂಕೋಚ ಸ್ವಭಾವದವಳಾಗಿದ್ದಳು. ಓದಿನಲ್ಲಿ ಮುಂದಿದ್ದರೂ ಸಂಕೋಚ ಸ್ವಭಾವದಿಂದ ಹೊರತರಬೇಕಿತ್ತು. ೮ನೇ ತರಗತಿಗೆ ಆಕ ಕಾಲಿಡುವ ಹೊತ್ತಿಗೆ ಅತೀವ ಆತ್ಮವಿಶ್ವಾಸ ಬೆಳೆದಿತ್ತು. ಅಂದೇ ಅವಳು ಸಾಧಕಿಯಾಗುತ್ತಾಳೆ ಎಂದು ಭಾವಿಸಿದ್ದೇವು. ಇಂದು ಇಡೀ ದೇಶಕ್ಕೆ ೧೦೦ನೇ ರ‍್ಯಾಂಕ್ ಎಂದರೆ ಸಾಮಾನ್ಯದ ಸಂಗತಿಯಲ್ಲ. ನಾವೇ ಸಾಧನೆ ಮಾಡಿದಷ್ಟು ಖುಷಿ ನಮ್ಮ ಮನಸಿನಲ್ಲಿ ಮೂಡಿದೆ ಎಂದರು. ವಿಜೇತಾ ತಂದೆ ಭೀಮರಾಯ ಅವರು ಸಹ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಆಗಿದ್ದರು. ಅತ್ಯಂತ ಸೌಜನ್ಯದ ವ್ಯಕ್ತಿ. ಅವರ ಮಗಳ ಸಾಧನೆ ನಿಜಕ್ಕೂ ನಾವೆಲ್ಲ ಸಂಭ್ರಮಿಸುವ ಘಳಿಗೆ. ಫೋನಿನಲ್ಲಿ ಆಕೆಯೊಂದಿಗೆ ಮಾತನಾಡಿದ್ದು, ಶಾಲಾ ದಿನಗಳನ್ನು ಆಕೆ ಮೆಲಕು ಹಾಕಿದ್ದಾಳೆ. ಆಕೆ ಸಾಧನೆ ನಮ್ಮನ್ನು ಭಾವುಕರನ್ನಾಗಿಸಿದೆ ಎಂದರು.