ಬೀಳಗಿಯಲ್ಲೂ ಭೂಕಂಪನ..! ಜನರಿಗೆ ಭೂಮಿ ಕಂಪಿಸಿದ ಅನುಭವ
ವಿಜಯಪುರದ ಹಲವೆಡೆ ಭೂಕಂಪನದ ಅನುಭವವಾಗಿರುವುದರ ಸುದ್ದಿಗಳು ಕೇಳಿ ಬಂದ ಬೆನ್ನಲ್ಲೇ ಇತ್ತ ಬೀಳಗಿಯಲ್ಲೂ ಅಂಥದೇ ಅನುಭವವಾಗಿದೆ ಎನ್ನಲಾಗಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ವಿಜಯಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭೂಕಂಪನದ ಅನುಭವವಾಗಿದ್ದು, ಇತ್ತ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲೂ ರಾತ್ರಿ 11.53ರ ಸುಮಾರಿಗೆ ಭೂಕಂಪನ ಉಂಟಾಗಿರುವ ಮಾಹಿತಿ ಕೇಳಿ ಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ ಮೊದಲು ತಿಕೋಟಾ, ಸೋಮದೇವರ ಹಟ್ಟಿ, ಕನಮಡಿ, ಬಾಬಾನಗರ ಭಾಗದಲ್ಲಿ ಭೂಕಂಪನದ ಸದ್ದು ಕೇಳಿ ಬರುತ್ತಲೇ ಇತ್ತು. ಆಗ ಅಲ್ಲಿನ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪರಿಶೀಲಿಸುವಂತೆ ಕೋರಿದಾಗ.ಮಳೆ ಹೆಚ್ಚಳದಿಂದ ಪಾತಾಳದಲ್ಲಿ ನೀರು ಹೆಚ್ಚಿದರೆ ಸಹಜವಾಗಿ ಕೇಳುವ ಸದ್ದು, ಭೂ ಕಂಪನದ ಸಾಧ್ಯತೆ ಕಡಿಮೆ ಎಂದು ಜನರ ಭಯ ದೂರಗೊಳಿಸಿದ್ದರು.
ಇದಾದ ನಂತರ ಅದೇ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಉಕ್ಕಲಿ, ಮಲಘಾಣ, ಹುಣಶ್ಯಾಳ ಪಿಬಿ,ಮಸೂತಿ, ಕರಬಂಟನಾಳ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಭೂಕಂಪನದ ಶಬ್ದ ಕೇಳುತ್ತಿದ್ದು, ಭಯಭೀತರಾಗಿರುವ ಜನ ನಿದ್ದೆ ಬಿಟ್ಟು ಮನೆಯಿಂದ ಹೊರಬಂದು ಜಾಗರಣೆ ಮಾಡುತ್ತಿದ್ದಾರೆ.
ಇದೀಗ ಭೂಕಂಪನದ ಸದ್ದು ವಿಜಯಪುರ ನಗರಕ್ಕೂ ಆವರಿಸಿದ್ದು, ಇತ್ತ ಜಿಲ್ಲೆಯ ಬೀಳಗಿಯಲ್ಲೂ ಅಂಥದೇ ಅನುಭವವಾಗಿರುವುದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೀಳಗಿಯಲ್ಲಿ ಉಂಟಾಗಿರುವುದು ಭೂಕಂಪನವೇ ಅಥವಾ ಭೂಮಿಯಲ್ಲಿನ ನೀರಿನ ಮಟ್ಟ ಹೆಚ್ವಳದಿಂದ ಉಂಟಾದ ಸದ್ದೇ ಎಂಬುದು ತಿಳಿದು ಬರಬಬೇಕಿದೆ. ನೀರು ಸಂಪೂರ್ಣ ಖಾಲಿಯಾದಾಗಲೂ ಭೂಮಿಯಿಂದ ಸದ್ದು ಬಂದಿರುವ ವರದಿಗಳು ಈ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಕೇಳಿ ಬಂದಿದ್ದವು.