ಶರಣ ಮೇಳಕ್ಕಿಂದು ಸಿಎಂ: ಮತ್ತೆ ಮುನ್ನೆಲೆಗೆ ಬರುವುದೇ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ
ಬಾಗಲಕೋಟೆ:ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೂಡಲ ಸಂಗಮದ ಶ್ರೀಬಸವ ಧರ್ಮ ಪೀಠದ ೩೭ ಶರಣ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿದ್ದು, ಸ್ವತಂತ್ರ ಧರ್ಮದ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ನಿರೀಕ್ಷೆಯಿದೆ.
ಬಸವ ಧರ್ಮಪೀಠದ ಹಿಂದಿನ ಪೀಠಾಧ್ಯಕ್ಷೆ ಲಿಂಗೈಕ್ಯ ಶ್ರೀ ಮಾತಮಹಾದೇವಿ ಅವರು ಸ್ವತಂತ್ರ ಧರ್ಮ ಹೋರಾಟದಲ್ಲಿ ಪ್ರಬಲವಾಗಿ ಕಾಣಿಸಿಕೊಂಡಿದ್ದರು, ಅವರ ಅಗಲಿಕೆ ನಂತರವೂ ಪೀಠ ಸ್ವತಂತ್ರ ಧರ್ಮದ ಪಟ್ಟು ಬಿಟ್ಟಿಲ್ಲ. ಪೀಠದಲ್ಲಿ ಎರಡು ಗುಂಪು ಗಳಾದರೂ ಎರಡೂ ಕಡೆಯವರು ಸ್ವತಂತ್ರ ಧರ್ಮ ಹೋರಾಟದ ಪಟ್ಟು ಬಿಟ್ಟಿಲ್ಲಿ ಹೀಗಾಗಿ ಈಗಿನ ಪೀಠಾಧ್ಯಕ್ಷೆ ಮಾತೆ ಶ್ರೀಗಂಗಾದೇವಿ ಅವರು ಸಹ ಸಿಎಂ ಎದುರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಹೊತ್ತಿನಲ್ಲಿ ಸ್ವತಂತ್ರ ಧರ್ಮದ ಗೂಡಿಗೆ ಸಿಎಂ ಕೈ ಹಾಕುವರೋ ಅಥವಾ ಮತ್ತ್ಯಾವುದಾದರೂ ಜಾಣ ನಡೆ ಪ್ರದರ್ಶಿಸುವರೋ ಕಾಯ್ದು ನೋಡಬೇಕಿ.
ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಸವ ಧರ್ಮ ಪೀಠಕ್ಕೆ ಲಕ್ಷಾಂತರ ಅನುಯಾಯಿಗಳಿದ್ದು, ಇತರ ಧರ್ಮಗಳ ಸ್ಥಾಪಕರ ಪುಣ್ಯಭೂಮಿಗೆ ಆಯಾ ವರ್ಗದ ಜನ ತೆರಳುವಂತೆ ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರ ಐಕ್ಯ ಸ್ಥಳಕ್ಕೂ ಭಕ್ತರು ವರ್ಷಕೊಮ್ಮೆ ಆಗಮಿಸಬೇಕೆಂಬ ಚಿಂತನೆ ಜತೆಗೆ ೩೩ ವರ್ಷಗಳಿಂದ ಧರ್ಮಪೀಠದ ಅಧಿವೇಶನ ಹಾಗೂ ೩೭ ವರ್ಷಗಳಿಂದ ಪ್ರವಚನ ಪಿತಾಮಹ ಶ್ರೀಲಿಂಗಾನಂದರು ಲಿಂಗೈಕ್ಯ ಮಾತೆಮಹಾದೇವಿ ಅವರ ಸ್ಮರಣೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತ ಬರಲಾಗುತ್ತಿದೆ.
ಈ ಬಾರಿ ಶರಣ ಮೇಳದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸುತ್ತಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಶರಣ ಮೇಳದಲ್ಲಿ ಪ್ರತಿ ವರ್ಷ ಕೈಗೊಳ್ಳುವ ನಿರ್ಣಯಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರ್ಣಯ ಕೈಗೊಳ್ಳುತ್ತಲೇ ಬರಲಾಗುತ್ತಿದ್ದು, ಈ ಬಾರಿಯೂ ಅಂಥದೊಂದು ನಿರ್ಣಯ ಸಹಜವಾಗಿಯೇ ಮಂಡನೆ ಆಗುವ ಸಾಧ್ಯತೆ ಇದೆ.