ಬಸ್ ನಿಲ್ದಾಣವೇ ಗ್ರಂಥಾಲಯ,ಜೀವ ಪಡೆದ ಕಲ್ಯಾಣಿ, ಅಂಗನವಾಡಿಗಳೇ ಮಾಂಟೆಸ್ಸರಿ: ಜನಮನ ಗೆಲ್ಲುತ್ತಿದ್ದಾರೆ ಜಿಪಂ ಸಿಇಒ..!

ನರೇಗಾ ಯೋಜನೆಯಡಿ ಜಿಪಂ ಕೈಗೊಂಡಿರುವ ಕಾಮಗಾರಿಗಳು ಜನಮನ ಗೆಲ್ಲುತ್ತಿವೆ. ಕಲ್ಯಾಣಿ, ಅಂಗನವಾಡಿಗಳಿಗೆ ಹೊಸ ರೂಪ ನೀಡಲಾಗಿದ್ದು, ಬೇವೂರಿನಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು ಕಾಯುವ ಸಮಯವನ್ನು ಓದಿಗೆ ಮೀಸಲಾಗುವಂತೆ ಕ್ರಮವಹಿಸಲಾಗಿದೆ.

ಬಸ್ ನಿಲ್ದಾಣವೇ ಗ್ರಂಥಾಲಯ,ಜೀವ ಪಡೆದ ಕಲ್ಯಾಣಿ, ಅಂಗನವಾಡಿಗಳೇ ಮಾಂಟೆಸ್ಸರಿ: ಜನಮನ ಗೆಲ್ಲುತ್ತಿದ್ದಾರೆ ಜಿಪಂ ಸಿಇಒ..!

ನಾಡನುಡಿ ನ್ಯೂಸ್
ಬಾಗಲಕೋಟೆ:
ವಿದ್ಯಾರ್ಥಿಗಳು ಬಸ್ ಗಾಗಿ ಕಾಯುವ ಸಮಯವನ್ನೇ ಓದಿಗಾಗಿ ಪರಿವರ್ತಿಸಿದರೆ ಹೇಗಿರುತ್ತದೆ...! ಲಕ್ಷ, ಲಕ್ಷ ಪೀಕುವ ಮಾಂಟೆಸ್ಸರಿಗಳ ರೀತಿಯಲ್ಲಿ ಸರ್ಕಾರಿ ಅಂಗನವಾಡಿಗಳು ಬದಲಾದರೆ ಹೇಗಿರುತ್ತದೆ. ಗತ ಕಾಲದ ಪಾಳುಬಿದ್ದ ಕಲ್ಯಾಣಿವೊಂದು ಆಧುನಿಕ ಮಾದರಿಯಲ್ಲಿ ಜೀವ ಪಡೆದು ಪುನಶ್ಚೇತನಗೊಂಡರೆ‌ ಹೇಗಿರುತ್ತೆ..!

ಅದನ್ನೆಲ್ಲ ನೀವು ಕಣ್ತುಂಬಿಕೊಳ್ಳಬೇಕಾದರೆ ಜಿಲ್ಲೆಯ ಗ್ರಾಪಂಗಳಿಗೆ ಭೇಟಿ ನೀಡಲೇಬೇಕು. ನರೇಗಾ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಅಡಿ ಜಿಲ್ಲಾ ಪಂಚಾಯತಿಯಿಂದ ಕೈಗೊಂಡಿರುವ ಕಾಮಗಾರಿಗಳು ಮನಸೂರೆಗೊಳ್ಳುವಂತೆ ಮಾಡುತ್ತಿವೆ. ಆಡಳಿತ ಮನಸ್ಸು ಮಾಡಿದರೆ ಪರಿವರ್ತನೆ ಎಂಬುದು ಕ್ಷಣಮಾತ್ರದಲ್ಲಿ ಸಾಕಾರಗೊಳ್ಳುತ್ತದೆ ಎಂಬುದಕ್ಕೆ‌ ಜಿಲ್ಲೆ ಸಾಕ್ಷಿಯಾಗಿದೆ.

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದಲ್ಲಿ ಗ್ರಂಥಾಲಯ, ಬೀಳಗಿ ತಾಲೂಕಿನ ಹೆಗ್ಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂಗನವಾಡಿಗಳ ಅಭಿವೃದ್ಧಿ ಹಾಗೂ ಬಾದಾಮಿ‌ ತಾಲೂಕಿನ ಹೊಸೂರ ಗ್ರಾಮದಲ್ಲಿ ಕಲ್ಯಾಣಿ ಅಭಿವೃದ್ಧಿಪಡಿಸಲಾಗಿದೆ. ಆಧುನಿಕತೆಗೆ ತಕ್ಕಂತೆ ಇವುಗಳಿಗೆ ಜೀವ ನೀಡಲಾಗಿದ್ದು, ಜನಮನ ಸೆಳೆಯುವಂತೆ ಮಾಡಲಾಗಿದೆ.

“ಬಾಗಲಕೋಟೆ ತಾಲೂಕಿನ ಗ್ರಾಮ ಪಂಚಾಯತಿ ಬೇವೂರನಲ್ಲಿ ಡಿಜಿಟಲ್ ಗ್ರಂಥಾಲಯ. ಪುಸ್ತಕಗಳನ್ನು ಏಕ ಕಾಲದಲ್ಲಿ online access ಮಾಡಿಕೊಳ್ಳುವ ಸೌಲಭ್ಯ ಇದೆ. ವಿದ್ಯಾರ್ಥಿಗಳು ಅಲ್ಲದೇ, ರೈತರಿಗೂ ಸಹ ಉಪಯುಕ್ತವಾದ ಸಾಹಿತ್ಯ ಕೂಡ ಲಭ್ಯವಿದೆ.  ಅಕ್ಕಪಕ್ಕದ ಗ್ರಾಮಗಳಿಂದ ಬೇವೂರಿಗೆ ಕಾಲೇಜು,ಶಾಲೆಗಳಿಗೆ ಬಸ್ ಮೂಲಕ ಬರುವ ವಿಧ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾಯುವ ಬದಲು  ಹತ್ತಿರವಿರುವ ಗ್ರಂಥಾಲಯದಲ್ಲಿ  ಕುಳಿತು ಅಧ್ಯಯನ ಮಾಡುವ ವಿಭಿನ್ನ ಯೋಚನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ವಿದ್ಯಾರ್ಥಿಗಳನ್ನು ಗ್ರಂಥಾಲಯದೆಡೆಗೆ ಸೆಳೆಯುವ ಪ್ರಯತ್ನ ಯಶಸ್ವಿಯಾಗಿದೆ. ಈ ಕಾರ್ಯಕ್ಕೆ ಪಿಡಿಒ ವಿಜಯ ಕೋಟಿನ್ ಕಾರ್ಯವನ್ನು ಜಿಪಂ ಸಿಇಒ ಟಿ.ಭೂಬಾಲನ್ ಶ್ಲಾಘಿಸಿದ್ದಾರೆ. 

ಗ್ರಾಂಥಾಲಯದಿಂದ ವಿದ್ಯಾರ್ಥಿಗಳಿಗೆ ಸಮಯದ ಸದುಪಯೋಗದ ಜೊತೆ ಅನಾವಶ್ಯಕ ಬಸ್ ನಿಲ್ದಾಣದಲ್ಲಿ ಕಾಲಹರಣ ಮಾಡುವುದು ತಪ್ಪಲಿದೆ. ವಿಧ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಬೇರೆ ಬೇರೆ ಆಸನಗಳು , ಫ್ಯಾನ್ , ಬೆಳಕು,  ನೀರು ವ್ಯವಸ್ಥೆಗಳು ಮಾಡಲಾಗಿದೆ. ಜೊತೆಗೆ ಚಿಕ್ಕ ಮಕ್ಕಳಿಗೆ ಬೇರೆ ಆಸನದ ವ್ಯವಸ್ಥೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಂತ್ರಜ್ಞಾನವನ್ನು ಮುಟ್ಟಿಸಿದ ತೃಪ್ತಿ ನಮಗಿದೆ ಎಂದು ಸಿಇಒ ಭೂಬಾಲನ್ ಹೇಳಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಟಿ.ಭೂಬಾಲನ್ ಸ್ಮಾರ್ಟ್ ಸಿಟಿ ಯೋಜನೆಯನ್ನು ಅತ್ಯಂತ ಸೂಕ್ತವಾಗಿ ನಿರ್ವಹಿಸಿ ಗಮನಸೆಳೆದಿದ್ದರು. ಅವರ ಕಾರ್ಯಕ್ಕೆ ರಾಷ್ಟ್ರಮಟ್ಟದಲ್ಲಿ‌ ಮೆಚ್ಚುಗೆ ವ್ಯಕ್ತವಾಗಿತ್ತು.‌ಇದೀಗ ಬಾಗಲಕೋಟೆ ಜಿಪಂ ಸಿಇಒ ಆಗಿಯೂ ಅವರು ಗಮನಸೆಳೆಯುತ್ತಿದ್ದಾರೆ.

ನರೇಗಾ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ‌ ಉತ್ತೇಜನೆ ನೀಡುತ್ತಿರುವ ಅವರು ಅನುದಾನ ಸದ್ಬಳಕೆ ಕಡೆಗೆ ಆದ್ಯತೆ ನೀಡುತ್ತಿದ್ದಾರೆ. ಜಿಪಂ ಸಾಧನೆಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ‌ ಜಾಲತಾಣಗಳನ್ನೂ ಕ್ರಿಯಾಶೀಲರಾಗಿರುವ ಅವರು ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. ಅಭಿವೃದ್ಧಿ ಯೋಜನೆಗಳು ಬೆರೆಳೆಣಿಕೆಗೆ ಸೀಮಿತಗೊಳ್ಳದೇ ಭೂಬಾಲನ್ ಅವಧಿಯಲ್ಲಿ ಜಿಲ್ಲೆ ಪರಿವರ್ತನೆ ಹೊಂದಲಿ ಎಂಬುದು ನೆಟ್ಟಿಗರ ಆಶಯವಾಗಿದೆ.