ಬುಡಾ ಮೂಲಕ ಎಲ್ಲ ವರ್ಗಗಳಿಗೂ ಸೂರು : ಆಯುಕ್ತ ಗಣಪತಿ ಪಾಟೀಲ
ಬಾಗಲಕೋಟೆ ಸೆ.೨೯:
ರಿಯಲ್ ಎಸ್ಟೇಟ್ ಉದ್ಯಮವಾಗಿ ಬೆಳೆದಿರುವ ಬಾಗಲಕೋಟೆಯಲ್ಲಿ ಇನ್ನು ಬಡವರು, ಮಧ್ಯಮ ವರ್ಗದವರು ಸುಲಭವಾಗಿ ನಿವೇಶನ ಪಡೆಯುವ ದಿನಗಳಿನ್ನು ಹತ್ತಿರವಾಗುತ್ತಿವೆ. ೧೧ ಗ್ರಾಮಗಳು, ಮುಳುಗಡೆ ಅಲ್ಲದ ನಗರವನ್ನು ಸೇರಿಕೊಂಡು ಅಸ್ತಿತ್ವಕ್ಕೆ ಬಂದಿರುವ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಈ ಕನಸನ್ನು ನನಸಾಗಿಸಲಿದೆ. ಆದರೆ ಅದಕ್ಕೆ ಸಮಯಬೇಕು.
ವಸತಿಗೆ ಯೋಗ್ಯವಾದ ಜಮೀನುಗಳನ್ನು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡು ಬಡಾವಣೆಯನ್ನು ಅಭಿವೃದ್ಧಿಪಡಿಸಲಿದೆ. ಸಾರ್ವಜನಿಕರಿಗೆ ಲಾಟರಿ ಮೂಲಕ ಹಂಚಲಿದೆ. ಇದು ಮಾತ್ರವಲ್ಲ. ಸಾರ್ವಜನಿಕ ಸಹಭಾಗಿತ್ವದ ಮೂಲಕವೂ ಬಡಾವಣೆ ಅಭಿವೃದ್ಧಿಗೆ ಅವಕಾಶವಿದೆ. ಭೂಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಾಧಿಕಾರದ ಆಯುಕ್ತ ಗಣಪತಿ ಪಾಟೀಲ ವಿನಂತಿಸಿದ್ದಾರೆ.
ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಅವರು ಶಾಸಕರ ದೂರದೃಷ್ಠಿಯಿಂದ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಇದು ನಗರದ ಹೊಸ ವಿನ್ಯಾಸಕ್ಕೆ ನೆರವಾಗಲಿದೆ. ಭೂಮಾಲೀಕರು ಜಮೀನನ್ನು ಸಹಭಾಗಿತ್ವದಲ್ಲಿ ನೀಡಿದರೆ ಪ್ರಾಧಿಕಾರವೇ ತನ್ನ ಬೊಕ್ಕಸದಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಶೇ.೫೦ ನಿವೇಶನಗಳನ್ನು ಭೂಮಾಲೀಕರಿಗೆ ನೀಡಿ ಬಾಕಿ ಶೇ.೫೦ ನಿವೇಶನಗಳನ್ನು ಸಾರ್ವಜನಿಕರಿಗೆ ವಿತರಿಸಲಿದೆ. ಇದು ಅತ್ಯಂತ ಸುಲಭದ ಪ್ರಯೋಗ. ಭೂಮಾಲೀಕರಿಗೂ ಲಾಭದಾಯವಾಗಲಿದೆ, ಹಾಗೆಯೇ ಬಡವರು, ಮಧ್ಯಮ ವರ್ಗದವರು ಯೋಗ್ಯಬೆಲೆಯಲ್ಲಿ ನಿವೇಶನ ಪಡೆಯಲು ಸಹಕಾರಿ ಆಗಲಿದೆ ಎಂದರು.
ಕೆರೆ ಅಭಿವೃದ್ಧಿಗಾಗಿ ಪ್ರಾಧಿಕಾರ ಆದ್ಯತೆ ನೀಡಲಿದೆ. ಮುಚಖಂಡಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರಲ್ಲಿ ಯೋಜನೆಯಿದೆ. ಅದು ಕಾರ್ಯಗತಗೊಂಡಾಗ ಪ್ರವಾಸಿ ತಾಣವಾಗಿ ಆಕರ್ಷಕ ಕೇಂದ್ರವಾಗಲಿದೆ. ಪ್ರಾಧಿಕಾರ ಈಗ ಅಂಬೆಗಾಲು ಇಡುತ್ತಿದೆ. ಎಲ್ಲವನ್ನೂ ಏಕಕಾಲಕ್ಕೆ ನಿರೀಕ್ಷಿಸುವಂತ್ತಿಲ್ಲ. ಆದರೆ ಭದ್ರಬುನಾದಿ ಹಾಕುವಲ್ಲಿ ಹೊಸ ಆಡಳಿತ ಮಂಡಳಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.