ದಲಿತರ ಪಾದಸ್ಪರ್ಶಿಸಿ ಬಿಜೆಪಿ ನಾಯಕರು ಕ್ಷಮೆಯಾಚಿಸಲಿ: ನಾಗರಾಜ ಹದ್ಲಿ  

ದಲಿತರ ಪಾದಸ್ಪರ್ಶಿಸಿ ಬಿಜೆಪಿ ನಾಯಕರು ಕ್ಷಮೆಯಾಚಿಸಲಿ: ನಾಗರಾಜ ಹದ್ಲಿ  
ಬಾಗಲಕೋಟೆ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ ಅವರು ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ವ್ಯಂಗ್ಯವಾಡಿದ್ದಾರೆ. 
ಈ ಕುರಿತು ಪ್ರಕಟಣೆ ನೀಡಿರು ಅವರು  ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರಿಗೆ, ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆಯೂ ಇಲ್ಲ. ಮೀಸಲಾತಿ ವಿರೋಧಿಸುವುದನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ ಎಂದು ಕುಟುಕಿದ್ದಾರೆ. 
ಮುನಿರತ್ನ ವಿರುದ್ಧ ಆಕ್ರೋಶ: 
ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಹಣಕ್ಕಾಗಿ ದೌರ್ಜನ್ಯ ಎಸಗುವಾಗ ದಲಿತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅತ್ಯಂತ ಕೀಳು ಪದಗಳನ್ನು ಬಳಸಿ ನಿಂದಿಸಿದ್ದನ್ನು ಬಸವಣ್ಣನ ನಾಡು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹದ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಬಿಜೆಪಿ ಆಡಳಿತದಲ್ಲಿ ಗುತ್ತಿಗೆದಾರರನ್ನು ಪೀಡಿಸುವ ಭೀಕರತೆಯ ಅನಾವರಣವಾಗಿದೆ, ಈ ಕಾರಣಕ್ಕಾಗಿಯೇ ಬಿಜೆಪಿ ಅವಧಿಯಲ್ಲಿ ಹಲವು ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದರು.
ಬಿಜೆಪಿ ಪಕ್ಷ ಈ ನಾಡಿನ ದಲಿತ ಸಮುದಾಯದ ಪಾದ ಸ್ಪರ್ಶಿಸಿ ಕ್ಷಮೆ ಕೇಳಬೇಕು, ನಾಡಿನ ಮಹಿಳೆಯರನ್ನು ಕೀಳಾಗಿ ಕಂಡಿರುವ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಲು ಯಾವುದೇ ಅರ್ಹತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.