ಗಣೇಶ ಉತ್ಸವ : 5 ಸಾವಿರ ಪ್ರೋತ್ಸಾಹಧನ-ಎಂಸಿಸಿ
ಬಾಗಲಕೋಟೆ : ನಗರದಲ್ಲಿ ಪ್ರತಿಷ್ಟಾಪನೆ ಮಾಡಲಿರುವ ಗಣೇಶ ಉತ್ಸವ ಮಂಡಳಿಗಳ ಧಾರ್ಮಿಕ-ಸಾಮಾಜಿಕ ಸೇವಾ ಕಾರ್ಯಗಳಿಗೆ ಪ್ರೇರೇಪಣೆ ನೀಡಲು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ದಿಂದ ತಲಾ 5 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷ, ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಾಗಲಕೋಟೆಯಲ್ಲಿ ಗಣೇಶ ಉತ್ಸವ ಅತ್ಯಂತ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸುತ್ತ ಬರಲಾಗುತ್ತಿದೆ. ಹಲವಾರು ಉತ್ಸವ ಮಂಡಳಿಗಳು, ಅನ್ನದಾಸೋಸ ಸೇರಿದಂತೆ ಹಲವು ರೀತಿಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಮಾಡುತ್ತ ಬಂದಿವೆ. ರಾಜ್ಯದಲ್ಲೇ ಬಾಗಲಕೋಟೆಯ ಉತ್ಸವ ಅತ್ಯಂತ ವಿಶೇಷವಾಗಿ ನಡೆಯಬೇಕು ಎಂಬುದು ನಮ್ಮ ಅಭಿಲಾಶೆ ಎಂದು ಹೇಳಿದ್ದಾರೆ.
ಇಂತಹ ಹಲವಾರು ಕಾರ್ಯಗಳಿಗೆ ನಮ್ಮ ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಸದಾ ಬೆನ್ನೆಲುಬಾಗಿ ನಿಂತು ಸಹಾಯ-ಸಹಕಾರ ನೀಡುತ್ತ ಬಂದಿದೆ. ಈ ವರ್ಷವೂ ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಗಣೇಶ ಉತ್ಸವ ಮಂಡಳಿಗಳಿಗೆ ತಲಾ 5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಉತ್ಸವ ಮಂಡಳಿಯ ಪದಾಧಿಕಾರಿಗಳು ಯಾರೂ ನಮ್ಮ ಬಳಿ ಬರುವುದು ಬೇಡ. ಫೌಂಡೇಶನ್ ವತಿಯಿಂದ ನಾವೇ ಪ್ರತಿ ಉತ್ಸವ ಮಂಡಳಿ ಹತ್ತಿರ ಬಂದು ಪ್ರೋತ್ಸಾಹಧ ನೀಡುವ ಜತೆಗೆ ಆಶೀರ್ವಾದ ಪಡೆಯಲಾಗುವುದು. ಬಾಗಲಕೋಟೆಯಲ್ಲಿ ಗಣೇಶ ಉತ್ಸವ, ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಯಲಿ ಎಂದು ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ.