ಯತ್ನಾಳ ಗಂಡ್ಸಾಗಿದ್ದರೆ ಆರೋಪ ಸಾಬೀತುಪಡಿಸಲಿ, ಇಲ್ಲವೇ ರಾಜಕೀಯದಿಂದ ನಿರ್ಗಮಿಸಲಿ

ಯತ್ನಾಳ ಗಂಡ್ಸಾಗಿದ್ದರೆ ಆರೋಪ ಸಾಬೀತುಪಡಿಸಲಿ, ಇಲ್ಲವೇ ರಾಜಕೀಯದಿಂದ ನಿರ್ಗಮಿಸಲಿ

ಯತ್ನಾಳ ಗಂಡ್ಸಾಗಿದ್ದರೆ ಆರೋಪ ಸಾಬೀತುಪಡಿಸಲಿ, ಇಲ್ಲವೇ ರಾಜಕೀಯದಿಂದ ನಿರ್ಗಮಿಸಲಿ

ಬಾಗಲಕೋಟೆ:

ಸಕ್ಕರೆ ಕಾರ್ಖಾನೆಗಳಿಂದ ಹಣವಸೂಲಿ ಮಾಡುತ್ತೇನೆ ಎಂದು ಆರೋಪಿಸಿರುವ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಗಂಡಸೇ ಆಗಿದ್ದರೆ ದಾಖಲೆ ಸಮೇತ ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ರಾಜಕಾರಣ ಬಿಡಬೇಕು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೂ ಒಂದು ಮರ್ಯಾದೆ ಇದೆ, ಯತ್ನಾಳಗೂ ಒಂದು ಮರ್ಯಾದೆ ಇದೆ ಅವರು ಕೆಲವೊಮ್ಮೆ ಮರ್ಯಾದೆ ಬಿಟ್ಟು ಮಾತನಾಡುತ್ತಾರೆ. ನನಗೆ ಬಳಸಿರುವ ಶಬ್ದಗಳನ್ನು ಬೇಕಿದ್ದರೆ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪ ಅವರಿಗೆ ಬಳಸಿಕೊಳ್ಳಲಿ. ನನ್ನ ಬಗ್ಗೆ ಮಾತನಾಡುವ ಯೋಗ್ಯತೆಯೂ ಯತ್ನಾಳಗೆ ಇಲ್ಲ ಎಂದು ಹರಿಹಾಯ್ದರು. ನನ್ನ ಬಗ್ಗೆ ಮಾಡಿರುವ ಆರೋಪಗಳಿಗೆ ಯತ್ನಾಳ ಗಂಡಸೇ ಆಗಿದ್ದರೆ ದಾಖಲೆಗಳನ್ನು ಬಿಡುಗಡೆಗೊಳಿಸಲಿ. ಸಾಬೀತಾದರೆ ನಾನು ರಾಜಕಾರಣ ಬಿಡುತ್ತೇನೆ. ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಯತ್ನಾಳ ರಾಜಕಾರಣ ಬಿಡುವರೆ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಯತ್ನಾಳಗೆ ಸ್ಟಾರ್ ಪ್ರಚಾರಕ ಎಂದು ಕರೆದಿದೆ ಅದಕ್ಕೆ ಅದರದೇ ಆದ ಗೌರವವಿರುತ್ತದೆ. ಆದರೆ  ಹಾದಿಬೀದಿಯಲ್ಲಿ ದಾಖಲೆ ಇಲ್ಲದೆ ನಾನು ಸಕ್ಕರೆ ಕಾರ್ಖಾನೆಗಳಿಂದ ೫೦ ಲಕ್ಷ ಕೇಳಿದ್ದೀನಿ ಅಂತಾ ಹೇಳ್ತಿದ್ದಾರೆ. ಇದು ಅವರ ವಿಚಾರವಾಗಿ ನಾನು ಕೊಡುತ್ತಿರುವ ಕೊನೆಯ ಪ್ರತಿಕ್ರಿಯೆ ಈ ಬಗ್ಗೆ ಕೇಳಲೇಬೇಡಿ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಸುಮ್ಮನಿದ್ದ ಯತ್ನಾಳ ಸ್ಟಾರ್ ಪ್ರಚಾರಕ ಎಂದ ಮೇಲೆ ಬಾಯಿಬಿಡಲು ಶುರುಮಾಡಿದ್ದಾರೆ. ನನ್ನ ಬಗ್ಗೆ ರಾಜ್ಯ ೭೪ ಕಾರ್ಖಾನೆಗಳ ಪೈಕಿ ಒಬ್ಬರಾದರೂ ಆರೋಪಿಸಿದರೂ ನಾನು ರಾಜಕೀಯ ನಿವೃತ್ತಿಪಡೆಯುತ್ತೇನೆ. ಕಾರ್ಖಾನೆಯವರು ಮಾಡಿದ ಆರೋಪ ಇದಲ್ಲ. ರಾಜಕೀಯಕ್ಕಾಗಿ ಮಾತನಾಡುವ ಯತ್ನಾಳ ರಾಜಕೀಯ ನಿವೃತ್ತಿಯಾವಾಗ ಪಡೆಯುತ್ತಾರೆ ಎಂಬುದನ್ನು ಮಾಧ್ಯಮಗಳೇ ಕೇಳಬೇಕೆಂದರು.
ಯತ್ನಾಳ ಹೊಂದಾಣಿಕೆ ರಾಜಕಾರಣದ ಬಗ್ಗೆ ನನಗೆ ತಿಳಿದಿಲ್ಲವೇ. ಸಮಯ ಬಂದಾಗ ಯಾರು, ಏನೆಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದು ಕುಟುಕಿದರು. ತಮ್ಮ ಸಹೋದರನ ಪುತ್ರ ಬಿಜೆಪಿ ಸೇರಿರುವ ಬಗ್ಗೆ ಯತ್ನಾಳ ಆರೋಪಕ್ಕೆ ಉತ್ತರಿಸಿದ ಅವರು, ನನ್ನ ಸಹೋದರ ನಮ್ಮನ್ನು ಬಿಟ್ಟು ಹೋಗಿ ೨೫ ವರ್ಷಗಳಾಗುತ್ತ ಬಂತು. ಪ್ರಬುದ್ಧರಾದಮೇಲೆ ಹಿಡಿದಿಡಲು ಸಾಧ್ಯವೇ. ನಾಳೆ ನನ್ನ ಮಗನೇ ಬಿಟ್ಟು ಹೋದರೂ ಹಿಡಿದಿಡಲು ಆಗುವುದಿಲ್ಲ. ಯತ್ನಾಳ ಅವರೇ ಜೆಡಿಎಸ್ ಸೇರಿ ನಮಾಜ್ ಮಾಡಿ, ಮುಸ್ಲಿಂರ ಮನೆಯಲ್ಲಿ ತಿಂದು ಬಂದಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಹುನಗುಂದ ಕ್ಷೇತ್ರಕ್ಕೆ ಈವರೆಗೆ ಸಂಯುಕ್ತಾ ಪಾಟೀಲ ಪ್ರಚಾರಕ್ಕೆ ತೆರಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಯಾವಾಗ, ಯಾವ ಕ್ಷೇತ್ರಕ್ಕೆ ತೆರಳಬೇಕೆಂಬ ವೇಳಾಪಟ್ಟಿಯಿದೆ ಅದರಂತೆ ಏ.೧೫ರಂದು ಹುನಗುಂದದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುತ್ತೇವೆ ಎಂದರು. ವೀಣಾ ಕಾಶಪ್ಪನವರ ಮುನಿಸಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಗರಂ ಆದ ಅವರು ಎಷ್ಟು ಬಾರಿ ಎಂದು ಇದಕ್ಕೆ ಉತ್ತರಿಸಲಿ ಅವರ ಪತಿ ಬಂದಮೇಲೆ ಅವರೂ ಬರುತ್ತಾರೆ. ಪಕ್ಷ ನಮಗೆ ಅನಿವಾರ್ಯವೇ ಹೊರತು ನಾವು ಪಕ್ಷಕ್ಕೆ ಅನಿವಾರ್ಯವಲ್ಲ ಇತಿಹಾಸದಲ್ಲಿ ಒಮ್ಮೊಮ್ಮೆ ಪ್ರಧಾನಿಯಾದವರಿಗೆ ಟಿಕೆಟ್ ಸಿಕ್ಕಿರುವುದಿಲ್ಲ ಕೆಲ ವಿಚಾರಗಳನ್ನು ಅನಗತ್ಯ ದೊಡ್ಡದಾಗಿ ಬಿಂಬಿಸುವುದರಲ್ಲಿ ಅರ್ಥವಿಲ್ಲ ಎಂದರು.