ದಿ. ನ್ಯಾಮಗೌಡರ ಕನಸು ನನಸು ನನ್ನ ಗುರಿ ಕಿಕ್ಕಿರಿದು ನೆರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಘೋಷಣೆ

ದಿ. ನ್ಯಾಮಗೌಡರ ಕನಸು ನನಸು ನನ್ನ ಗುರಿ ಕಿಕ್ಕಿರಿದು ನೆರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಘೋಷಣೆ

ದಿ. ನ್ಯಾಮಗೌಡರ ಕನಸು ನನಸು ನನ್ನ ಗುರಿ
ಕಿಕ್ಕಿರಿದು ನೆರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಘೋಷಣೆ

ಬಾಗಲಕೋಟೆ: ರೈಲ್ವೆ ಯೋಜನೆಗಳು ಸೇರಿದಂತೆ ಕೇಂದ್ರದ ಮಾಜಿ ಸಚಿವ ದಿ. ಸಿದ್ದು ನ್ಯಾಮಗೌಡರು ಕಂಡಿದ್ದ ಕನಸುಗಳನ್ನು ನನಸು ಮಾಡುವುದೇ ನನ್ನ ಗುರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.
ಜಮಖಂಡಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಗಲಕೋಟ – ಕುಡಚಿ ರೈಲ್ವೆ ಯೋಜನೆಯ ಅನುಷ್ಠಾನ ಸಿದ್ದು ನ್ಯಾಮಗೌಡರ ಕನಸಾಗಿತ್ತು. ನೀವು ಆಶೀರ್ವಾದ  ಮಾಡಿದರೆ ಅವರ ಕನಸನ್ನು ನನಸು ಮಾಡುತ್ತೇನೆ ಎಂದು ಹೇಳಿದರು.
ಸಮಗ್ರ ನೀರಾವರಿ ದೃಷ್ಟಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಕಳಸಾ ಬಂಡೂರಿ, ಮಹಾದಾಯಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೆ ಉತ್ತರ ಕರ್ನಾಟಕದ ರೈತರ ಬದುಕು ಹಸನಾಗಲಿದೆ. ಜವಳಿ ಪಾರ್ಕ್ ಸ್ಥಾಪನೆ ಮಾಡಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಹೀಗಾಗಿ ಈ ಯೋಜನೆಗಳನ್ನು ಆದ್ಯತೆ ಮೇಲೆ ಅನುಷ್ಠಾನ ಮಾಡುವುದು ನನ್ನ ಆಶಯ ಎಂದು ಹೇಳಿದರು. 

ಸಿದ್ದು ನ್ಯಾಮಗೌಡರು ಬ್ಯಾರೇಜ್ ನಿರ್ಮಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ರೈತರ ಬಗ್ಗೆ ಕಳಕಳಿ ಇರುವ ನಾಯಕರು  ಮಾಡುವ ಕೆಲಸ ಇಂಥದ್ದು. ಜನಸೇವಕ ಹೇಗೆ ಇರಬೇಕು ಎಂಬದಕ್ಕೆ ಅವರು ಮಾದರಿ ಎಂದು ಬಣ್ಣಿಸಿದರು.
ಬಡ ಕುಟುಂಬಗಳಿಗೆ ನೆರವಾಗಲು ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೆ ಬಿಜೆಪಿ ಮುಖಂಡರು ಟೀಕೆ ಮಾಡಿದರು. ಬಡವರ ಕಷ್ಟ ಏನು ಎಂಬ ಅರಿವು ಬಿಜೆಪಿ ನಾಯಕರಿಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಕುಟುಂಬಗಳಿಗೆ ಆಸರೆಯಾಗಿವೆ ಎಂಬುದನ್ನು ಅವರು ಅರಿತು ಮಾತನಾಡಬೇಕು ಎಂದರು. 
ಬಿಜೆಪಿ ನಾಯಕರು ಮಹಿಳೆಯರ ಬಗ್ಗೆ ಮಾತನಾಡುತ್ತಾರೆ. ಆದರೆ ಒಲಿಂಪಿಕ್ಸ್ನಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ತಂದು ದೇಶದ ಗೌರವ ಹೆಚ್ಚಿಸಿದ ಮಹಿಳೆಯರು ಲೈಂಗಿಕ ಕಿರುಕುಳ ವಿರೋಧಿಸಿ ಪ್ರತಿಭಟನೆ ನಡೆಸಿದರೆ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಮುಖಂಡನ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಲಾಗಿದೆ ಎಂದು ಟೀಕಿಸಿದರು.


ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಅವರು ಮಾತನಾಡಿ, ಪ್ರಧಾನಿ ಭ್ರಷ್ಟರನ್ನುಜೈಲಿಗೆ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ. ಕರೊನಾ ಅವಧಿಯಲ್ಲಿ ಕರ್ನಾಟಕದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಗಮನಿಸಿದರೆ ಹಲವು ಬಿಜೆಪಿ ಮುಖಂಡರು ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ವಾಗ್ದಾಳಿ ಮಾಡಿದರು.
ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ಬೆದರಿಕೆ ಹಾಕಿ ಅವರನ್ನು ಬಿಜೆಪಿ ಸೇರ್ಪಡೆಯಾಗುವಂತೆ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, ಅಜಿತ್ ಪವಾರ್ ಸೇರಿದಂತೆ ಹಲವು ಮುಖಂಡರನ್ನು ಇದೇ ರೀತಿ ಬೆದರಿಸಿ ಬಿಜೆಪಿ ಸೇರುವಂತೆ ಮಾಡಿದರು ಎಂದು ಹೇಳಿದರು.

ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಇದು ಸಂಯುಕ್ತ ಪಾಟೀಲ ಮತ್ತು ಪಿ.ಸಿ. ಗದ್ದಿಗೌಡರ ನಡುವಿನ ಚುನಾವಣೆಯಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಚುನಾವಣೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತರಲಿದೆ. ಇದು ಆತಂಕಕಾರಿ ಸಂಗತಿ. ಮತದಾರರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಂಯುಕ್ತ ಪಾಟೀಲ ಅವರು ಸಂಸತ್ತಿಗೆ ಹೋಗಲು ಅರ್ಹ ಅಭ್ಯರ್ಥಿ.  ಕಾನೂನು ಪದವಿ ಪಡೆದಿದ್ದಾರೆ. ಹಲವು ಭಾಷೆಗಳು ಗೊತ್ತು. ಪ್ರಬುದ್ಧತೆ ಇದೆ. ಸಂಸತ್ತಿನಲ್ಲಿ ಬಾಗಲಕೋಟ ಜಿಲ್ಲೆಯ ಧ್ವನಿ ಕೇಳಬೇಕಾದರೆ ಅವರನ್ನು ಆಯ್ಕೆ ಮಾಡಬೇಕು ಎಂದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಸಂಯುಕ್ತ ಪಾಟೀಲ ಅವರಿಗೆ ಜಮಖಂಡಿ ಕ್ಷೇತ್ರದಿಂದ ಅಧಿಕ ಮತಗಳ ಮುನ್ನಡೆ ಕೊಡಿಸುವ ಭರವಸೆ ನೀಡಿದರು.  ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕ ಜೆ.ಟಿ. ಪಾಟೀಲ ಮತ್ತಿತರರು ಮಾತನಾಡಿದರು. ಸಿದ್ದು ಕೊಣ್ಣೂರ

ಬಾಕ್ಸ್ 
ಬಿಜೆಪಿ 200 ಸ್ಥಾನ ಗೆಲ್ಲಲ್ಲ 
ಬಿಜೆಪಿ ಈ ಚುನಾವಣೆಯಲ್ಲಿ 200 ಸ್ಥಾನಗಳನ್ನು ಗಳಿಸುವುದಿಲ್ಲ. ಅವರೇ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಈಗಾಗಿ ಅವರು ಆತಂಕದಲ್ಲಿದ್ದಾರೆ . ಕರ್ನಾಟಕದಲ್ಲಿ ಈ ಬಾರಿ ೨೦ ಸ್ಥಾನಗಳಲ್ಲಿ ಜಯಗಳಿಸಿ ತೋರಿಸುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. 

ಈಗ ಯುವಕರು ಮೋದಿಯ ಆಕರ್ಷಣೆಯಿಂದ ಹೊರಗೆ ಬಂದಿದ್ದಾರೆ.  ಮೋದಿ ಅವರ ಮೇಲೆ ಯುವಕರು ಅಪಾರ ವಿಶ್ವಾಸ ಹೊಂದಿದ್ದರು. ಉದ್ಯೋಗದ ಕನಸು ಕಂಡಿದ್ದ ಯುವಶಕ್ತಿ, ಈಗ ಕೇಂದ್ರ ಸರ್ಕಾರ ಯಾವುದೇ ಉದ್ಯೋಗ ಸೃಷ್ಟಿ ಮಾಡದ ಕಾರಣ ನಿರಾಸೆ ಹೊಂದಿ ಬಿಜೆಪಿಯಿಂದ ವಿಮುಖವಾಗುತ್ತಿದೆ ಎಂದರು. 
ಮಹಾದಾಯಿ ಯೋಜನೆ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅನುಷ್ಠಾನದ ಮಾತನ್ನಾಡಿದ್ದರು. ಆದರೆ ಕೇಂದ್ರದಲ್ಲಿ ಅವರದ್ದೇ ಸರ್ಕಾರದಿಂದ ಕ್ಲಿಯರೆನ್ಸ್  ಪಡೆಯಲು ಸಾಧ್ಯವಾಗಲಿಲ್ಲ ಎಂದು ಗೇಲಿ ಮಾಡಿದರು.

ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ಒಮ್ಮೆಯೂ ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತಲಿಲ್ಲ. ಸತತ ಎರಡು ಬರಗಾಲ ಬಂದರೂ ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೇಂದ್ರದ ಮೇಲೆ ಒತ್ತಡ ತರಲಿಲ್ಲ. ಎಂಪಿ ಆಗಿದ್ದರೂ ಏನೂ ಮಾಡಲು ಆಗಲಿಲ್ಲ ಎಂಬ ಕಾರಣಕ್ಕಾಗಿಯೇ ಹಾವೇರಿ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ ಸ್ಪರ್ದೆಯಿಂದ ಹಿಂದೆ ಸರಿದರು. ಎಂದರು.