ಶಿವಾಜಿ, ಬಸವಣ್ಣನ ಮೂರ್ತಿ ಸ್ಥಾಪನೆಗೆ ಗಣೇಶ ಮಂಡಳಿಗಳಲ್ಲಿ ಬ್ಯಾನರ್ 

ಶಿವಾಜಿ, ಬಸವಣ್ಣನ ಮೂರ್ತಿ ಸ್ಥಾಪನೆಗೆ ಗಣೇಶ ಮಂಡಳಿಗಳಲ್ಲಿ ಬ್ಯಾನರ್ 
ಬಾಗಲಕೋಟೆ: ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಒದಗಿಸಬೇಕೆಂಬ ಬ್ಯಾನರ್‌ಗಳು ಸಾರ್ವಜನಿಕ ಗಣೇಶ ಮಂಡಳಿಗಳಲ್ಲಿ ರಾರಾಜಿಸುತ್ತಿವೆ. 
ನಗರ, ನವನಗರ, ವಿದ್ಯಾಗಿರಿಯೂ ಸೇರಿದಂತೆ ೮೦ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್‌ಗಳನ್ನು ಕಟ್ಟಿ ಎರಡೂ ಮೂರ್ತಿಗಳ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ. ನಗರದ ಸೋನಾರ ಬಡಾವಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಗೆ ಸ್ಥಳವನ್ನು ಗುರುತಿಸಲಾಗಿದ್ದು, ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವುದರಿಂದ ಸಿದ್ಧಪಡಿಸಿರುವ ಬೃಹದಾಕಾರದ ಮೂರ್ತಿಗಳು ಮೂಲೆ ಸೇರಿವೆ. ಈ ನಡುವೆ ಕೆಲವರು ಚಿಕ್ಕ ಮೂರ್ತಿಯನ್ನು ವಿವಾದಿತ ಸ್ಥಳದಲ್ಲಿ ಕೂಡಿಸಿದಾಗಲೂ ಜಿಲ್ಲಾಡಳಿತ ಅದನ್ನು ತೆರವುಗೊಳಿಸಿದೆ. 
ಈ ವಿಚಾರವಾಗಿ ನಿರಂತರ ಹೋರಾಟಗಳು ನಡೆದಿದ್ದು, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ಬಿ.ತಿಮ್ಮಾಪೂರ, ಶಾಸಕ ಎಚ್.ವೈ.ಮೇಟಿ ಅವರನ್ನು ಮೂರ್ತಿ ಪ್ರತಿಷ್ಠಾಪನೆಗೆ ಆಹ್ವಾನಿಸಿದ್ದರು. ಸಚಿವರು ಬರುವುದಾಗಿ ಒಪ್ಪಿದ್ದರಾದರೂ ಮುಂದೆ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಜಿಲ್ಲಾಡಳಿತ ಕೂಡ ಯಾವ ಕಾರಣಕ್ಕೂ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದರಿಂದ ಗಣೇಶ ಮಂಡಳಿಗಳ ಮುಂದೆ ಬ್ಯಾನರ್‌ಗಳನ್ನು ಕಟ್ಟಲಾಗಿದೆ.