ಶಾಲಾ ಹಾಲಿನ ಪಾಕೀಟ ಕಳ್ಳತನ ಮಾಡಿದ ಆರೋಪಕ್ಕೆ ಶಿಕ್ಷೆ
ಬಾಗಲಕೋಟೆ: ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ ಪಾಕೀಟ ಕಳ್ಳತನ ಮಾಡಿದ ಆರೋಪಿಗೆ ಬಾಗಲಕೋಟೆ ೨ನೇ ಹೆಚ್ಚುವರಿ ಹಿರಿಯ ದಿವಾಣಿ ಸಿಜೆ, ಜೆ.ಎಫ್‌ಸಿ ನ್ಯಾಯಾಲಯ ಒಂದು ವರ್ಷ ಕಾರಾವಾಸ ಶಿಕ್ಷೆ ತಲಾ ೧೫ ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.
ತಾಲೂಕಿನ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಶೇಲ್ಲಿಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಕಚೇರಿಯ ಕೊಠಡಿಗೆ ಹಾಕಿದ್ದ ಬೀಗ ಮುರಿದು ೮೦ ಕೆಜಿ ತೂಕದ ೩೨ ಸಾವಿರ ರೂ.ಗಳ ಹಾಲಿನ ಪೌಡರ ಪಾಕೀಟಗಳನ್ನು ಕಮಲೇಶ ಈರಪ್ಪ ಗೋಳನ್ನವರ, ಸುರೇಶ ಅಗಸರ, ಶಿವಾನಂದ ಡೊಳ್ಳಿನವರ ಈ ಮೂವರು ಕಳ್ಳತನ ಮಾಡಿದ್ದರು. ಪಿಎಸ್‌ಐ ಪ್ರಕಾಶ ಬನಕಾರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೨ನೇ ಹೆಚ್ಚುವರಿ ದಿವಾನಿ ನ್ಯಾಯಾಧೀಶರು ಅವರು ಆರೋಪಿಗಳಿಗೆ ಕಲಂ ೪೫೭, ೩೮೦ ಮತ್ತು ೨೦೧ ಐಪಿಸಿ ಅಡಿ ಒಂದು ವರ್ಷ ಕಾರಾವಾಸ ಶಿಕ್ಷೆ ಮತ್ತು ತಲಾ ೧೫ ಸಾವಿರ ರೂ.ಗಳ ದಂಡವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಅಭಿಯೋಜಕಿ ಶಾರದಾ ಬದಾಮಿ ಪ್ರಕರಣದ ವಾದ ಮಂಡಿಸಿದ್ದರು.