ಭೂಸ್ವಾಧೀನ‌ ಪ್ರಕ್ರಿಯೆ ಚುರುಕು:ಯುಕೆಪಿ ಹಂತ ಮೂರಕ್ಕೂ ಒತ್ತು-ಸಚಿವ ಕಾರಜೋಳ

ಯುಕೆಪಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

ಭೂಸ್ವಾಧೀನ‌ ಪ್ರಕ್ರಿಯೆ ಚುರುಕು:ಯುಕೆಪಿ ಹಂತ ಮೂರಕ್ಕೂ ಒತ್ತು-ಸಚಿವ ಕಾರಜೋಳ

ಬಾಗಲಕೋಟೆ: ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಹಂತದಲ್ಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕಿಗೊಳಿಸುವಂತೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

            ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಳಿಗಡೆಯಾಗುವ 4871 ಎಕರೆ, ಪುನರ್ವಸತಿಗಾಗಿ 2394 ಎಕರೆ, ಕಾಲುವೆಗಾಗಿ 9173 ಎಕರೆ ಸೇರಿ ಒಟ್ಟು 16438 ಕ್ಷೇತ್ರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದ್ದು, ಪ್ರಕ್ರಿಯೆ ಚುರುಕಾಗಬೇಕು. ಬಾಕಿ ಭೂಸ್ವಾಧೀನ ಪ್ರಕ್ರಿಯೆ ಸಹ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.


           ಜಿಲ್ಲೆಗೆ ಆಗಮಿಸಿದ ಪ್ರೋಬೇಷನರಿ ಕೆಎಎಸ್ ಅಧಿಕಾರಿಗಳಿಗೆ ತರಬೇತಿ ನೀಡಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲು ಕಾರಜೋಳ ತಿಳಿಸಿದರು. ಈಗಾಗಲೇ ಒಟ್ಟು 1,33,867 ಎಕರೆ ಜಮೀನ ಪೈಕಿ 23341 ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದು, 2716.51 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ. ಭೂಸ್ವಾಧೀನ ಐತೀರ್ಪುಗೊಂಡ ಪ್ರಕರಣಗಳಲ್ಲಿ ಇನ್ನು 250.44 ಕೋಟಿ ಪರಿಹಾರ ಹಣ ವಿತರಿಸಲು ಬಾಕಿ ಉಳಿದಿದ್ದು, ರೈತರಿಂದ ಒಚರ್ ಪಡೆದು ಪರಿಹಾರ ವಿತರಣೆ ಕ್ರಮಜರುಗಿಸಲು ಸೂಚಿಸಿದರು.
         ವಿವಿಧ ಹಂತದಲ್ಲಿರುವ ಭೂಸ್ವಾಧೀನ, ಪುನರ್ವಸತಿ ಸೌಲಭ್ಯದ ಕಾಮಗಾರಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಒಳಗೊಂಡಂತೆ ಸುಮಾರು 3000 ಕೋಟಿ ಅನುದಾನ ಮಾರ್ಚ ಅಂತ್ಯಕ್ಕೆ ಅವಶ್ಯಕತೆ ಇದ್ದು, ಕ್ರಮವಹಿಸುವುದಾಗಿ ತಿಳಿಸಿದರು. ಉದಗಟ್ಟಿ ಪುನರ್ವಸತಿ ಕೇಂದ್ರದ ಅಭಿವೃದ್ದಿಗೆ 1 ಕೋಟಿ ನೀಡಲು ತಿಳಿಸಿದ ಕಾರಜೋಳ ಅವರು ಮುಳುಗಡೆ ಪ್ರದೇಶದಲ್ಲಿ ಸರಕಾರಿ ಗೌಂಟನ್ ಜಾಗದಲ್ಲಿ ಮನೆ, ಗುಡಿಸಲು ಕಟ್ಟಿಕೊಂಡವರಿಗೂ ಪರಿಹಾರ ನೀಡಲು ತಿಳಿಸಿದರು. ಪುನರ್ವಸತಿ ನಿರ್ಮಾಣದ ನಂತರ ಉಳಿದ ಜಮೀನನ್ನು ಸರಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಅವಕಾಶವಿದ್ದಲ್ಲಿ ಈ ಕುರಿತು ಸಭೆ ನಡೆಸಿ ತಿರ್ಮಾನಿಸಲು ತಿಳಿಸಿದರು.


          3ನೇ ಹಂತದ ಗ್ರಾಮೀಣ ಮತ್ತು ನಗರ ಸೇರಿ ಒಟ್ಟು 25,550 ಕಟ್ಟಡಗಳ ಪೈಕಿ 2,383 ಕಟ್ಟಡಗಳಿಗೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಸದ್ಯ 4 ಗ್ರಾಮಗಳ 3739 ಕಟ್ಟಡಗಳ ಐತೀರ್ಪು ಹಂತದಲ್ಲಿವೆ. ಪುನರ್ವಸತಿಗಾಗಿ 1821.23 ಎಕರೆ, ನ್ಯಾಯಾಲಯದಿಂದ ತಡೆಯಾಜ್ಞೆ 487.14 ಎಕರೆ, ಅಧೀಸೂಚನೆ ಹಂತದಲ್ಲಿರುವ 99.01 ಎಕರೆ, ಪ್ರಸ್ತಾವನೆ ಹಂತದಲ್ಲಿ 2295.13 ಎಕರೆ ಇರುವುದಾಗಿ ಯುಕೆಪಿಯ ವಿಷೇಶ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ ಸಭೆಗೆ ತಿಳಿಸಿದರು.
          ಯುಕೆಪಿ ಹಂತ 1 ಮತ್ತು 2ರಲ್ಲಿ ಕೃಷ್ಣಾ ಕಣಿವೆಯ ಸ್ಕೀಮ್-1ನೇ ತೀರ್ಪಿನನ್ವಯ 173 ಟಿ.ಎಂಸಿ ನೀರು ಹಂಚಿಕೆಯಾಗಿದ್ದು, ಎಫ್‍ಆರ್‍ಎಲ್ 519.600 ಮೀಟರ್‍ವರೆಗೆ ನೀರನ್ನು ಸಂಗ್ರಹಿಸಿ 11 ಯೋಜನೆಗಳಿಂದ ಯೋಜಿತ 6.20 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ನಾರಾಯಣರ ಜಲಾಶಯ ವ್ಯಾಪ್ತಿಯ 37010 ಎಕರೆ, ಆಲಮಟ್ಟಿ ಜಲಾಶಯ ವ್ಯಾಪ್ತಿಯ 138460 ಎಕರೆ, ಭೀಮಾ ಬ್ರಿಡ್ಜ್‍ಗಾಗಿ 289 ಎಕರೆ, ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜಗಾಗಿ 1024 ಸೇರಿ ಒಟ್ಟು 176783 ಎಕೆರೆ ಜಮೀನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
        ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ, ಯುಕೆಪಿಯ ಆಯುಕ್ತ ಶಿವಯೋಗಿ ಕಳಸದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಯುಕೆಪಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಡಿ.ದಾಸರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.