ಸಾರಾಯಿ ಕೇಳಿದ ಗೆಳೆಯನ ಮರ್ಡರ್: ಆರೋಪಿಗೆ ಜೀವಾವಧಿ ಶಿಕ್ಷೆ..!

ಸಾರಾಯಿ ಕೇಳಿದ ಗೆಳೆಯನ ಮರ್ಡರ್: ಆರೋಪಿಗೆ ಜೀವಾವಧಿ ಶಿಕ್ಷೆ..!
ಬಾಗಲಕೋಟೆ: 
ಸಾರಾಯಿ ಕೊಡಿಸುವಂತೆ ಪೀಡಿಸಿದ್ದ ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 
೨೦೨೨ರಲ್ಲಿ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗಂಡಿ ಗ್ರಾಮದ ಸರಹದ್ದಿನಲ್ಲಿರುವ ಮೋದಿ ಪ್ಲಾಟ್‌ನಲ್ಲಿ ಈ ಘಟನೆ ನಡೆದಿತ್ತು.  ಚಂದ್ರಪ್ಪ ನಿಜಲಿಂಗಪ್ಪ ಬಣಪ್ಪನವರ(೪೦) ಎಂಬಾತ ಸರಾಯಿ ಕೊಡಿಸುವಂತೆ ತನ್ನ ಸ್ನೇಹಿತ ರವಿ ಕನಕಪ್ಪ ಪಾತ್ರೋಟಿಯನ್ನು ಪೀಡಿಸಿದ್ದ. ಸ್ನೇಹಿತನ ಕಾಟ ತಾಳಲಾರದೆ ಚಂದಪ್ಪ ಬಣಪ್ಪನವರನನ್ನು ರವಿ ಪಾತ್ರೋಟಿ ದೊಡ್ಡ ಕಲ್ಲಿನಿಂದ ತಲೆಜಜ್ಜಿ ಕೊಲೆಗೈದಿದ್ದ. ನಂತರ ಅಲ್ಲಿಂದ ಬನಹಟ್ಟಿಯ ಮಠವೊಂದಕ್ಕೆ ತೆರಳಿ ಅಲ್ಲಿರುವ ಮಾಡಿನಲ್ಲಿ ಅಪರಾಧ ಸಂದರ್ಭದಲ್ಲಿ ಬಳಸಿದ್ದ ಬಟ್ಟೆ ಬಚ್ಚಿಟ್ಟಿದ್ದ. ಈ ಸಂಬAಧ ಪಿಐ ಶಿವಾನಂದ ಕಮತಗಿ ಅವರು ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಅವರು, ಅಭಿಯೋಗದ ಪರ ಸಲ್ಲಿಸಿದ ಸಾಕ್ಷಿ, ಪುರಾವೆಗಳನ್ನು ಅವಲೋಕಿಸಿ ಆರೋಪಿ ರವಿ ಪಾತ್ರೋಟಿಗೆ ಐಪಿಸಿ ಸೆಕ್ಷನ್ ೩೦೨ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ೫ ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಅವರು ವಾದ ಮಂಡಿಸಿದ್ದರು.