ಬಾಗಲಕೋಟೆ ಎಂದೂ ಮರೆಯದ ಸಾಹಿತಿ ಅಬ್ಬು.....
ಅಬ್ಬಾಸ್ ಮೇಲಿನಮನಿ ಆತ್ಮೀಯ ವಲಯದಲ್ಲಿ ಅಬ್ಬು ಎಂದೇ ಜನಪ್ರಿಯ. ಬಾಲ್ಯದಿಂದಲೇ ಸಾಹಿತ್ಯದ ಒಡನಾಟ, ಸ್ನೇಹಜೀವಿ ಇದೇ ಅವರ ಬಂಡವಾಳ. ಇನ್ನೂ ಉತ್ಸಾಹದ ಚಿಲುಮೆ, ಪಾದರಸ ವ್ಯಕ್ತಿತ್ವ, ಹಠಾತ್ ನಿಧನ ಸಾಹಿತ್ಯ ವಲಯ, ನಗರ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ, ಆಘಾತವನ್ನುಂಟು ಮಾಡಿದೆ.
೧೯೭೦ ರಲ್ಲಿ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರೊಂದಿಗೆ ಹೆಗಲು ಮೇಲೆ ಕೈ ಇಟ್ಟವರು ಅಬ್ಬಾಸ್ ಮೇಲಿನಮನಿ (ಸಂಗ್ರಹ ಚಿತ್ರ)
.
ನಾಡನುಡಿ ವಿಶೇಷ
ಅಬ್ಬಾಸ್ ಮೇಲಿನಮನಿ ಆತ್ಮೀಯ ವಲಯದಲ್ಲಿ ಅಬ್ಬು ಎಂದೇ ಜನಪ್ರಿಯ. ಬಾಲ್ಯದಿಂದಲೇ ಸಾಹಿತ್ಯದ ಒಡನಾಟ, ಸ್ನೇಹಜೀವಿ ಇದೇ ಅವರ ಬಂಡವಾಳ. ಇನ್ನೂ ಉತ್ಸಾಹದ ಚಿಲುಮೆ, ಪಾದರಸ ವ್ಯಕ್ತಿತ್ವ, ಹಠಾತ್ ನಿಧನ ಸಾಹಿತ್ಯ ವಲಯ, ನಗರ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ, ಆಘಾತವನ್ನುಂಟು ಮಾಡಿದೆ.
ಮುಳುಗಡೆ ತಟದ ಬಾಗಲಕೋಟೆ ಹಿನ್ನೀರು ಪ್ರದೇಶದ ಹಳಪೇಟೆ ಅಬ್ಬಾಸ ಮೇಲಿನಮನಿಯ ಬದುಕಿನ ಬೇರು. ಅಲ್ಲಿಯೇ ಅವರ ಆತ್ಮೀಯತೆ, ಜಾತಿಯ ವೈರುಧ್ಯಗಳು, ಧರ್ಮದ ಭಿನ್ನತೆ ಇವರಲ್ಲಿ ಬೇಸರ ತುಂಬಿತ್ತು. ಈ ಜಡತ್ವ ನಿವಾರಣೆಯಾಗಬೇಕು, ಮನುಷ್ಯ ಜೀವಿಯಾಗಬೇಕೆಂಬುದೇ ಅವರ ತುಡಿತ, ಸಾಹಿತ್ಯದ ಆಕರ್ಷಣೆ ಉಂಟು ಮಾಡಿತು.
ಅವರ ಬಾಲ್ಯದ ಸಂಗಾತಿಗಳಾಗಿದ್ದ ಶಾಸಕ ಡಾ. ವೀರಣ್ಣ ಚರಂತಿಮಠ, ಬ.ವಿ.ವ. ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಇಂತಹವರ ಒಡನಾಟದಲ್ಲಿ ಶೈಕ್ಷಣಿಕ ಬದುಕನ್ನು ಉನ್ನತ ಮಟ್ಟದಲ್ಲಿಯೆ ಮುಗಿಸಿದ್ದರು. ೯ನೇ ತರಗತಿಯಲ್ಲಿರುವಾಗಲೇ ಸಂಯುಕ್ತ ಕರ್ನಾಟಕದಲ್ಲಿ ನಾನಿ ಕಾಕಾ ಅವರ ಅಂಕಣಕ್ಕೆ ಪ್ರಶ್ನೆ ಕೇಳುವದು, ಬಾನೂಲಿಯಲ್ಲಿ ಗೀತೆಗಳ ಕೋರಿಕೆ, ಗಿಳಿಬಿಂದು ಕಾರ್ಯಕ್ರಮ ಹೀಗೆ ಅಕ್ಷರದೊಂದಿಗಿನ ಅವರ ಸಾಂಗತ್ಯ ನಿಧಾನವಾಗಿ ಸಾಹಿತ್ಯ ಕೃಷಿಯತ್ತ ಅವರನ್ನು ಸೆಳೆಯಿತು. ಪದವಿ ಮುಗಿಯುತ್ತಿದ್ದಾಗಲೇ ಹಿರಿಯ ಪತ್ರಕರ್ತ ದಿ. ಟಿ.ಎಸ್. ಪಾಟೀಲರ ಒಡನಾಟದಲ್ಲಿ ನಾಡನುಡಿ ಕನ್ನಡ ದಿನಪತ್ರಿಕೆಗೆ ಅಂಕಣಕಾರರಾದ ಅಬ್ಬಾಸ್ ಕಥೆಗಳು, ಕವನ, ಕಾದಂಬರಿಯ ಮೂಲಕ ಸಾರಸ್ವ ಲೋಕದಲ್ಲಿ ಮಿಂಚಿದ ಪ್ರತಿಭೆಯಾದರು. ಬಂಡಾಯ, ನವೋದಯ, ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಅರಗಿಸಿಕೊಂಡಿದ್ದ ಅವರಿಗೆ ತಮ್ಮದೇ ಆದ ವಿಶಿಷ್ಟ ಛಾಪಿನ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಚಲನಚಿತ್ರದ ಬಗ್ಗೆಯೂ ಅವರಿಗೆ ವ್ಯಾಮೋಹ, ೧೯೭೦ ರಲ್ಲಿ ಚರಂತಿಮಠ ಮತ್ತಿತರರೊಂದಿಗೆ ಪ್ರವಾಸಕ್ಕೆ ತೆರಳಿದಾಗ ಪ್ರೀಮಿಯರ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಶರಪಂಜರ ಚಿತ್ರದ ಚಿತ್ರೀಕರಣವನ್ನು ವೀಕ್ಷಿಸಿ ಸಂಭ್ರಮಿಸಿದ್ದರು. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರೊಂದಿಗೆ ತೆಗೆಸಿಕೊಂಡಿದ್ದ ಭಾವಚಿತ್ರ ಅವರಿಗೆ ಅಪ್ಯಾಯಮಾನವಾಗಿತ್ತು. ಅಬ್ಬಾಸರಲ್ಲಿ ಪ್ರತಿಭೆ ಶ್ರೀಮಂತವಾಗಿತ್ತು. ಅವರೊಬ್ಬ ಅಕ್ಷರದ ಕಣಜ, ಅದಕ್ಕೂ ಮಿಗಿಲಾದ ಸ್ನೇಹಜೀವಿ ಎಂದು ಅವರ ಒಡನಾಡಿ ಅಶೋಕ ಸಜ್ಜನ ಸ್ಮರಿಸುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಗೌರವ ಕಾರ್ಯದರ್ಶಿಗಳೂ ಆಗಿದ್ದ ಅಬ್ಬಾಸ್‌ಗೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ದೊರೆತಾಗ ಅದೇ ನೆಮ್ಮದಿಯ ಆಸರೆಯಾಗಿತ್ತು. ಸಾಕಷ್ಟು ಬಡತನವನ್ನು, ಸಾಮಾಜಿಕ ತಲ್ಲಣಗಳು ಅವರನ್ನು ಅಂಟಿಕೊAಡಿದ್ದವು, ಅದೆಲ್ಲವನ್ನೂ ಮೀರಿ ಮನುಷ್ಯಜೀವಿಯಾಗಿದ್ದ ಅಬ್ಬಾಸ್‌ರ ಬರವಣಿಗೆಯಲ್ಲಿ ಮಾತೃವಾತ್ಸಲ್ಯ ಇತ್ತು, ಮಾನವೀಯತೆಯನ್ನು ಪ್ರತಿಪಾದಿಸುತ್ತಿತ್ತು.
ಪುತ್ರಿ ಆಸ್ಮಾ ತಂದೆಯ ಎಲ್ಲ ಪ್ರತಿಭೆಯನ್ನು ಅರಗಿಸಿಕೊಂಡಿದ್ದರು. ಅವಳ ಸಾಮೀಪ್ಯದಲ್ಲಿಯೇ ಇಹಲೋಕ ಯಾತ್ರೆ ಮುಗಿಸಿದ್ದು ಕಾಕತಾಳೀಯ.
ಡಾ. ಪ್ರಕಾಶ ಖಾಡೆ, ಪ್ರೊ. ಸಿದ್ದರಾಮಯ್ಯ ಮಠಪತಿ, ಶಿವಾನಂದ ಪಾಟೀಲ, ಕಿರಣ ಬಾಳಾಗೋಳ, ವಿನೋದ ಯಡಹಳ್ಳಿ ಮತ್ತಿತರರು ಅಬ್ಬಾಸ್ ಮೇಲಿನಮನಿ ನಿಧನದಿಂದ ಬಾಗಲಕೋಟೆ ಅಮೂಲ್ಯ ಪ್ರತಿಭೆಯನ್ನು ಕಳೆದುಕೊಂಡಿದೆ ಎಂದು ಶೋಕಿಸಿದ್ದಾರೆ. ಅಬ್ಬಾಸ್‌ರ ಆತ್ಮೀಯ ವಲಯ, ನಗರದ ಸಾಹಿತ್ಯ ವಲಯ ಅಬ್ಬಾಸ್ ನೀ ಮತ್ತೊಮ್ಮೆ ಹುಟ್ಟಿ ಬಾ ಎಂದೇ ಪ್ರಾರ್ಥಿಸುತ್ತಿದೆ.