ಬಾಗಲಕೋಟೆ:
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆ.೨೯ರ ಗುರುವಾರ ಚುನಾವಣೆ ಜರುಗಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿದೆ. ಬಹುಮತ ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ.
೩೫ ಸದಸ್ಯ ಬಲದ ನಗರಸಭೆಯಲ್ಲಿ ೨೯ ಬಿಜೆಪಿ, ಓರ್ವ ಪಕ್ಷೇತರ ಹಾಗೂ ೫ ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಬಿಜೆಪಿ ಬಹುಮತ ಹೊಂದಿರುವುದರಿAದ ಅಧಿಕಾರ ಪಡೆಯಲಿದ್ದು, ಎರಡೂ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ನಗರಸಭೆ ಸದಸ್ಯರ ಆಯ್ಕೆಗೆ ೨೦೧೮ರಲ್ಲಿ ಚುನಾವಣೆ ನಡೆದಿತ್ತು. ಮುಂದೆ ೨೦೨ಂರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿದ್ದರಿಂದ ಅಲ್ಲಿಂದ ಸದಸ್ಯರ ಅವಧಿ ಆರಂಭಗೊ0ಡಿತು. ಹಾಲಿ ಸದಸ್ಯರ ಅವಧಿ ೨೦೨೫ರ ನವೆಂಬರ್‌ಗೆ ಮುಕ್ತಾಯವಾಗಲಿದೆ.
೨೦೨೦ರಲ್ಲಿ ನಗರಸಭೆಗೆ ಅಧ್ಯಕ್ಷರಾಗಿ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷರಾಗಿ ಬಸವರಾಜ ಅವರಾದಿ ಆಯ್ಕೆಯಾಗಿದ್ದರು. ಅವರ ಅವಧಿ ೨೦೨೩ರ ವಿಧಾನಸಭೆ ಚುನಾವಣೆ ಪೂರ್ವದಲ್ಲೇ ಮುಕ್ತಾಯಗೊಂಡಿತ್ತು. ಹೊಸ ಸರ್ಕಾರ ಬಂದು ೧೬-೧೭ ತಿಂಗಳಾದರೂ ಮೀಸಲು ಪಟ್ಟಿ ಪ್ರಕಟವಾಗಿರಲಿಲ್ಲ.ಈಗ ಮೀಸಲು ಪಟ್ಟಿ ಪ್ರಕಟಗೊಂಡರೂ ಹೊಸಬರಿಗೆ ಕೇವಲ ೧೪ ತಿಂಗಳು ಅಧಿಕಾರ ಲಭಿಸಲಿದೆ. ಈ ಬಾರಿ ನಗರಸಭೆಯಲ್ಲಿ ಆಡಳಿತವಿಲ್ಲದೇ ಸದಸ್ಯರು ಹೆಚ್ಚು ಕಾಲಕಳೆಯುವಂತಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧೆ;
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪಾರ್ವತಿ ರಮೇಶ ಅಕ್ಕಿಮರಡಿ, ಸವಿತಾ ಲೆಂಕಣ್ಣವರ, ರೇಖಾ ಕಲಬುರಗಿ, ಶೋಭಾರಾವ್, ಶಿವಲೀಲಾ ಪಟ್ಟಣಶೆಟ್ಟಿ, ರತ್ನಾ ಕೆರೂರ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಶಿವಬಸು ಬಳ್ಳಾರಿ, ಚೆನ್ನಯ್ಯ ಹಿರೇಮಠ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ ಬುಧವಾರ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಡುವ ಬಗ್ಗೆಯೂ ಪ್ರಸ್ತಾಪವಾಗಿದ್ದು, ಇದು ನಿಜವಾದಲ್ಲಿ ಬಾಗಲಕೋಟೆ ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಸ್ಥಾನವನ್ನು ಮಹಿಳೆಯರು ಅಲಂಕರಿಸಿದAತೆ ಆಗಲಿದೆ. ೮ ಜನರಿಗೂ ನಾಮಪತ್ರ ಸಲ್ಲಿಕೆಗೆ ಸಿದ್ಧತೆಯಲ್ಲಿರುವಂತೆ ಸೂಚಿಸಲಾಗಿದ್ದು, ಆ ಪೈಕಿ ಇಬ್ಬರನ್ನು ಪಕ್ಷದ ನಾಯಕರು ಅಂತಿಮಗೊಳಿಸಲಿದ್ದಾರೆ.