ನಾನು ಗಾಂಧಿಯೂ ಆಗಲಿಲ್ಲ, ಗೋಡ್ಸೆಯೂ ಆಗಲಿಲ್ಲ: ನಂಜಯ್ಯನಮಠ 

ನಾನು ಗಾಂಧಿಯೂ ಆಗಲಿಲ್ಲ, ಗೋಡ್ಸೆಯೂ ಆಗಲಿಲ್ಲ: ನಂಜಯ್ಯನಮಠ 


ಬಾಗಲಕೋಟೆ: 
ರಾಜಕೀಯದಲ್ಲಿ ಅವಕಾಶ ವಂಚಿತನಾದ ನಾನು ಗಾಂಧಿಯೂ ಆಗಲಿಲ್ಲ, ಗೋಡ್ಸೆಯೂ ಆಗಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ತಾವು ನಡೆದು ಬಂದ ದಾರಿಯನ್ನು ಮೆಲಕು ಹಾಕಿದ್ದಾರೆ. 
 ಗುರುವಾರ ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ತಮ್ಮ ನಂಜು0ಡ ಆತ್ಮಕಥನ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎರಡು ಬಾರಿ ಶಾಸಕನಾಗಿ, ಹಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷನಾಗಿದ್ದೆ, ಮುಂದೆ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವ ಕನಸಿದ್ದರೂ ನಾನಾ ರೂಪದಲ್ಲಿ ಅವಕಾಶ ವಂಚಿತನಾದೆ, ಕೊನೆಗೆ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ನಾನು ಪ್ರತಿನಿಧಿಸುತ್ತಿದ್ದ ಗುಳೇದಗುಡ್ಡ ಕ್ಷೇತ್ರವೂ ಕಳೆದುಹೋಯಿತು ಹೀಗಾಗಿ ನಾನು ಗಾಂಧಿಯೂ ಆಗಲಿಲ್ಲ, ಗೋಡ್ಸೆಯೂ ಆಗಲಿಲ್ಲ ಎಂದು ವಿಶ್ಲೇಷಿಸಿದರು. 


 ನನ್ನ ತಂದೆ ಜಿ.ಪಿ.ನಂಜಯ್ಯನಮಠ ಅವರು ೧೯೪೮ರಲ್ಲೇ ಎಂಎ ಪದವಿ ಪಡೆದು ಬಾಗಲಕೋಟೆ ಬವಿವ ಸಂಘದಲ್ಲಿ ಪ್ರಾಧ್ಯಾಪಕರಾಗಿದ್ದರು, ೧೯೫೨ರಲ್ಲಿ ದೇಶದ ಮೊದಲ ಚುನಾವಣೆ ನಡೆದಾಗ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಸತತವಾಗಿ ಸೋಲು ಕಂಡಿದ್ದರು ನಮ್ಮ ತಂದೆ ೫೩ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾಗ ನಾನು ೨೪ ವಯಸ್ಸಿನವನಾಗಿದ್ದೆ. ಅತ್ಯಂತ ಬಡತನದ ದಿನಗಳನ್ನೂ ನಾನು ಕಂಡಿದ್ದೇನೆ ಎಂದು ಹೇಳಿದರು. 
 ಕೃತಿ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ಜಿ.ಜಿ.ಹಿರೇಮಠ ಅವರು, ಮರಾಠಿಯಲ್ಲಿ ಆತ್ಮಕಥನಗಳು ಕನ್ನಡಕ್ಕಿಂತಲೂ ಹೆಚ್ಚು, ಅಲ್ಲಿ ದಲಿತರ ಆತ್ಮಕಥೆಗಳು ಹೆಚ್ಚಾಗಿದ್ದು, ಅವರು ಅನುಭವಿಸಿದ ನೋವುಗಳನ್ನು ವಿವರಿಸಿರುತ್ತಾರೆ. ಕನ್ನಡದಲ್ಲಿ ನಂಜಯ್ಯನಮಠರ ನಂಜು0ಡಿ ಉತ್ತಮ ಆತ್ಮಕಥನವಾಗಿದ್ದು, ಹೊಸದಾಗಿ ರಾಜಕೀಯ ಪ್ರವೇಶಿಸುವವರು ಕಡ್ಡಾಯವಾಗಿ ಓದಲೇಬೇಕಾದ ಕೃತಿ ಇದಾಗಿದೆ ಎಂದರು. 
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರು ಮಾತನಾಡಿ, ನಂಜಯ್ಯನಮಠ ಅವರು ನನಗೆ ಹಲವು ದಶಕಗಳ ಗೆಳೆಯ ಅವರ ಕೃತಿಯನ್ನು ಲೋಕಾರ್ಪಣೆಗೊಳಿಸುತ್ತಿರುವುದು ಸಂತಸದ ವಿಷಯವಾಗಿದೆ. ಎರಡು ಬಾರಿ ಅವರಿಗೆ ಮಂತ್ರಿ ಆಗುವ ಅವಕಾಶವಿದ್ದು, ೧೯೮೯ರಲ್ಲಿ ಅವರು ಅಲ್ಪಮತಗಳ ಸೋಲು ಕಂಡಿದ್ದರು, ಮುಂದೆ ರಾಜಕೀಯ ವಿದ್ಯಮಾನಗಳು ಬಿರುಸಾದಾಗ ಶಾಸಕರಾಗಿದ್ದರೂ ಎಚ್.ಕೆ.ಪಾಟೀಲರೊಂದಿಗೆ ಗುರುತಿಸಿಕೊಂಡಿದ್ದರು, ಪಾಟೀಲರನ್ನು ಬಿಟ್ಟು ಬಂದರೆ ಮಂತ್ರಿ ಮಾಡುವ ಷರತ್ತು ಅವರಿಗೆ ನೀಡಲಾಗಿತ್ತು ಆದರೆ ಎಚ್.ಕೆ.ಪಾಟೀಲರೊಂದಿಗಿನ ಸ್ನೇಹವನ್ನೇ ಅವರು ಆಯ್ಕೆ ಮಾಡಿಕೊಂಡಿದ್ದರು ಎಂದು ವಿವರಿಸಿದರು. 
 ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ರವೀಂದ್ರ ಕಲಬುರಗಿ,  ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಗೌರವ ಕಾರ್ಯದರ್ಶಿ ಚಂದ್ರಶೇಖರ ಕಾಳನ್ನವರ ವೇದಿಕೆಯಲ್ಲಿದ್ದರು.