ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ಕರವೇ ಧರಣಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ಕರವೇ ಧರಣಿ
ಬಾಗಲಕೋಟೆ: ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.೧೦೦ ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನವನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಧರಣಿ ನಡೆಸಿದರು.
ಡಾ.ಸರೋಜಿನಿ ಮಹಿಷಿ ವರದಿಯಲ್ಲಿ ರಾಜ್ಯ ಸರ್ಕಾರದ ಅಧಿನ ಕಚೇರಿ ಹಾಗೂ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಸಿ ಮತ್ತು ಡಿ ಹುದ್ದೆಯಲ್ಲಿ ಶೇ.೧೦೦ ಮೀಸಲಾತಿಗೆ ಶಿಫಾರಸ್ಸು ಇದ್ದು, ಹಲವು ಹುದ್ದೆಗಳಿಗೆ ಶೇ.೮೦ರವರೆಗೆ ಮೀಸಲಾತಿಗೆ ಶಿಫಾರಸ್ಸು ಮಾಡಲಾಗಿದೆ. ೫೪ ಶಿಫಾರಸ್ಸುಗಳು ಪೈಕಿ ೪೫ ಶಿಆಫರಸ್ಸುಗಳನ್ನು ರಾಜ್ಯ ಸರ್ಕಾರ ಒಪ್ಪಿದ್ದು, ಅವುಗಳು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವ ಕೆಲಸವಾಗಬೇಕೆಂದು ಒತ್ತಾಯಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಅವರು, ರಾಜ್ಯ ಸರ್ಕಾರ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಆಯ್ಕೆ ೧೯೪೬ರ ಅನ್ವಯ ಬಲಿಷ್ಠವಾದ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳು ಸಿ ಮತ್ತು ಡಿ ದರ್ಜೆಯ ಶೇ.೧೦೦ ಹುದ್ದೆಗಳಲ್ಲಿ ಕನ್ನಡಿಗರು ಇರಬೇಕು. ಎಲ್ಲ ಖಾಸಗಿ ಸಂಸ್ಥೆಗಳು ಇತರ ಹುದ್ದೆಗಳಲ್ಲಿ ಶೇ.೮೦ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
೧೫ ವರ್ಷ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರು ಎಂದು ಪರಿಗಣಿಸಲಾಗುತ್ತಿದ್ದು, ಅವರಿಗೆ ಕನ್ನಡ ಲಿಖಿತ ಪರೀಕ್ಷೆಯನ್ನು ಸಂಘಟಿಸಿ ಅದರಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ನೀಡುವ ಕೆಲಸವಾಗಬೇಕೆಂದು ಹೇಳಿದರು. ನಿಯಮಾವಳಿ ಪಾಲಿಸದ ಸಂಸ್ಥೆಗಳ ಮಾನ್ಯತೆಯನ್ನು ರದ್ದುಪಡಿಸಿ ಅವುಗಳಿಗೆ ನೀಡಿರುವ ಭೂಮಿ ಹಾಗೂ ಸವಲತ್ತುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅವರಿಗೆ ಮನವಿಪತ್ರ ಸಲ್ಲಿಸಿದರು.