ಈಗಲ್ಲದಿದ್ದರೂ ಮುಂದೆ ಒಬ್ಬ ಒಳ್ಳೆಯ ಸಿಎಂ ಸಿಕ್ಕೇ ಸಿಗುತ್ತಾರೆ
ಬಾಗಲಕೋಟೆ: ಈಗ ಅಲ್ಲದಿದ್ದರೂ ಮುಂದಿನ ೫ ವರ್ಷ ಅಥವಾ ೧೦ ವರ್ಷಕ್ಕಾದರೂ ದೇವರು ಒಬ್ಬ ಒಳ್ಳೆಯ ಮುಖ್ಯಮಂತ್ರಿಯನ್ನು ಕೊಟ್ಟೆಕೊಡುತ್ತಾನೆ ಅವರು ಮೀಸಲಾತಿ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಡಾ.ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಹಿಂದಿನAತೆ ಪ್ರಬಲವಾಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಅಚ್ಚರಿ ಮೂಡಿಸಿದರು. ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ ಭಯ, ಗೌರವಯಿತ್ತು, ಈಗಿನವರ(ಸಿದ್ದರಾಮಯ್ಯ) ಅವರಿಗೆ ನಾವೇ ಭಯಪಡುವ ಸ್ಥಿತಿಯಿದೆ. ಬೊಮ್ಮಾಯಿ ಅವರು ಕರೆದಲ್ಲಿಗೆ ಬರುತ್ತಿದ್ದರು, ಈಗ ನಾನೇ ಮನೆ ಬಾಗಿಲಿಗೆ ಹೋಗಿ ನಿಲ್ಲುವ ಸ್ಥಿತಿಯಿದೆ. ಸಿಎಂ ಯಾರಿದ್ದರೂ ಮೀಸಲಾತಿ ವಿಚಾರವಾಗಿ ಸ್ಪಂದಿಸಲೇಬೇಕು. ದೇವರು ಈಗ ಅಲ್ಲದಿದ್ದರೂ ಮುಂದಿನ ೫ ಅಥವಾ ೧೦ ವರ್ಷದಲ್ಲಿ ಒಬ್ಬ ಒಳ್ಳೆಯ ಮುಖ್ಯಮಂತ್ರಿಯನ್ನು ಕೊಟ್ಟೆಕೊಡುತ್ತಾನೆ ಅವರು ಮೀಸಲಾತಿ ವಿಷಯವನ್ನು ಈಡೇರಿಸುತ್ತಾರೆ. ಈಗ ಸ್ಪಂದನೆ ಸಿಕ್ಕಿಲ್ಲ ಎಂದು ನಾವು ಕುಗ್ಗುವ ಅವಶ್ಯಕತೆ ಇರುವುದಿಲ್ಲ ಹೋರಾಟ ನಿರಂತರವಾಗಿ ಇರಲಿದೆ ಎಂದರು. ಶಾಸಕರ ಮೂಲಕ ಹೋರಾಟ ನಡೆದಿದ್ದು, ವಕೀಲರ ಮೇಲೆ ನನಗೆ ಭರವಸೆಯಿದೆ. ಅವರಿಂದ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ ಹೋರಾಟ ಮುಂದವರಿಸುವೆ ಎಂದು ಹೇಳಿದರು.