ಬಾಗಲಕೋಟೆ: ನಗರದ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಅವರು ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಕೋಟೆ ಜನರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಕಾನೂನಿನಲ್ಲಿ ಪರಿಣಿತಿ ಹೊಂದಿದ್ದ ಅವರು ಕ್ಲಿಷ್ಟಕರ ಪ್ರಕರಣಗಳಲ್ಲೂ ಅತ್ಯಂತ ಚತುರತೆಯಿಂದ ವಾದಿಸಿ ಗೆಲವುಸಾಧಿಸುತ್ತಿದ್ದರು. ಅವರ ವಾಕ್ಚಾತುರ್ಯ, ಸರಳವ್ಯಕ್ತಿತ್ವ ದೊಡ್ಡ ಖ್ಯಾತಿಯನ್ನು ತಂದು ಕೊಟ್ಟಿತ್ತು. ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವೂ ಸೇರಿದಂತೆ ನಗರದ ಬಹುತೇಕ ಬ್ಯಾಂಕ್‌ಗಳಿಗೆ ಅವರು ಕಾನೂನು ಸಲಹೆಗಾರರಾಗಿದ್ದು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಕೆಲಕಾಲ ಕಾನೂನು ಸಲಹೆಗಾರರಾಗಿದ್ದ ಅವರು ಸಂತ್ರಸ್ತರ ವಿಚಾರದಲ್ಲಿ ಕಾನೂನು ತೊಡಕುಗಳನ್ನು ನಿವಾರಿಸುವಲ್ಲಿ ತಜ್ಞರಾಗಿದ್ದರು.
ನವನಗರದಲ್ಲಿರುವ ಅಖಿಲ ಭಾರತ ಮಧ್ವಮಹಾಮಂಡಳಕ್ಕೂ ಅಧ್ಯಕ್ಷರಾಗಿದ್ದ ಅವರು ಸಮಾಜಮುಖಿ ಚಿಂತನೆಗಳ ಮೂಲಕ ಹೆಸರು ಮಾಡಿದ್ದರು. ಬ್ರಾಹ್ಮಣ ಸಮುದಾಯದ ಯಾವುದೇ ಕೆಲಸಗಳಾಗಿದ್ದರೂ ಮುಂಚೂಣಿಯಲ್ಲಿ ನಿಂತು ಮಾಡುತ್ತಿದ್ದರು. ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಆಪ್ತ ಒಡನಾಡಿಗಳಾಗಿದ್ದರು. ಕೆ.ಎಸ್.ದೇಶಪಾಂಡೆ ಅವರ ನಿಧನ ವೈಯಕ್ತಿಕವಾಗಿ ನನಗೆ ತೀವ್ರ ದುಖವನ್ನು ಧರಿಸಿದೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದು, ಇತರರು ಪ್ರಾಣಾಪಾಯದಿಂದ ಪಾರಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಚರಂತಿಮಠ ಅವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಉಪಾಧ್ಯಕ್ಷ ಗಿರೀಶ ಮಸೂರಕರ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರೆಂಜಲ್ ಸೇರಿ ಗಣ್ಯರು ದೇಶಪಾಂಡೆ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಖಾನಾಪುರ ಬಳಿ ಅಪಘಾತ
ಹಿರಿಯ ನ್ಯಾಯವಾದಿ ಕೆ.ಎಸ್.ದೇಶಪಾಂಡೆ ಅವರ ಕುಟುಂಬ ದಾಂಡೇಲಿ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಖಾನಾಪುರ ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೆಎಸ್ ಅವರು ನಿಧನರಾಗಿದ್ದು, ಅವರ ಪತ್ನಿ ರಾಧಿಕಾ ದೇಶಪಾಂಡೆ(೬೬) ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ವಾಹನ ಚಲಾಯಿಸುತ್ತಿದ್ದ ಪುತ್ರ ಸಾಗರ ದೇಶಪಾಂಡೆ(೨೮) ಅವರ ಕೈಗೆ ಪೆಟ್ಟಾಗಿದ್ದು, ಮಕ್ಕಳು ಸೇರಿ ೮ ಜನ ವಾಹನದಲ್ಲಿದ್ದರು ಎಂದು ತಿಳಿದು ಬಂದಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಪ್ರ ಸಮಾಜದ ಮುಖಂಡ, ಬ್ರಾಹ್ಮಣ ಮಹಾಸಭಾ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ ಅವರ ಹಠಾತ್ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವುಂಟಾಗಿದೆ. ಬ್ರಾಹ್ಮಣ ಸಮಾಜದ ಸಂಘಟನೆ ವಿಚಾರದಲ್ಲಿ ಅವರು ನನಗೆ ಒಡನಾಡಿಗಳಾಗಿದ್ದರು. ವೃತ್ತಿಯಲ್ಲಿ ನಮ್ಮದು ಒಂದೇ ಕ್ಷೇತ್ರವಾಗಿರುವುದರಿಂದ ಕಾನೂನಿನಲ್ಲೂ ಅವರು ಪರಿಣಿತಿಯನ್ನು ಹೊಂದಿದ್ದರು. ಸಮಾಜಕ್ಕೆ ಜೀವನ ಮೀಸಲಿಟ್ಟಿದ್ದ ದೇಶಪಾಂಡೆ ಅವರಂಥ ಕ್ರಿಯಾಶೀಲ ವ್ಯಕ್ತಿಗಳ ನಿಧನದಿಂದಾಗಿ ಸಮಾಜ ಬಡವಾಗಿದೆ. ಅವರ ಕುಟುಂಬಕ್ಕೆ ದುಖಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಕೋರಿಕೊಳ್ಳುತ್ತೇನೆ.
ಅಶೋಕ ಹಾರನಹಳ್ಳಿ, ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು