ತಾಯಿ, ಅವಳಿ ಮಕ್ಕಳ ಪ್ರಾಣ ಉಳಿಸಿದ ಎಚ್‌ಎಸ್‌ಕೆ ವೈದ್ಯರು
ಬಾಗಲಕೋಟೆ: ಬವಿವ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವೈದ್ಯರು ಪ್ರಸವಪೂರ್ವ ಜನಿಸಿ ಪ್ರಾಣಾಪಾಯದಲ್ಲಿದ್ದ ಅವಳಿ ಶಿಶುಗಳಿಗೆ ಯಶಸ್ವಿ ಚಿಕಿತ್ಸೆ ನೀಡಿ ಗುಣಮುಖಗೊಳಿಸಿರುವರು. ಕುಮಾರೇಶ್ವರ ಆಸ್ಪತ್ರೆಯಲ್ಲಿ ಇದನ್ನು ಅಪರೂಪದ ಚಿಕಿತ್ಸಾ ಪ್ರಕರಣವೆಂದು ಪರಿಗಣಿಸಲಾಗಿದೆ.
ಕುಮಾರೇಶ್ವರ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಹೆರಿಗೆಗೆಂದು ದಾಖಲಾದ ಮಹಿಳೆ ಹೃದಯದ ತೊಂದರೆಯಿAದ (ಕಾರ್ಡಿಯೊಮಯೋಪತಿ) ಬಳಲುತ್ತಿದ್ದು ತೀವ್ರನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿಡಲಾಗಿತ್ತು. ಚಿಕಿತ್ಸೆಯ ಸಂದರ್ಭದಲ್ಲೆ ಮಹಿಳೆಗೆ ಸಿಜೇರಿಯನ್ ಮೂಲಕ ಪ್ರಸವಪೂರ್ವ ಅವಳಿಶಿಶುಗಳು ಜನಿಸಿದವು. ಪ್ರಸವಪೂರ್ವ ಜನಿಸಿದ ಅವಳಿಶಿಶುಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರಾಣಾಪಾಯದಲ್ಲಿದ್ದವು. ಜನಿಸಿದ ಸಂದರ್ಭ ಒಂದು ಮಗುವಿನ ತೂಕ ೮೮೦ ಗ್ರಾಂ ಮತ್ತು ಇನ್ನೊಂದು ಮಗುವಿನ ತೂಕ ೧.೪೬ ಕಿ.ಗ್ರಾಂ ಇದ್ದಿದ್ದು ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣವೆ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ ಮಕ್ಕಳನ್ನು ದಾಖಲಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟವನ್ನು ನೀಡಲಾಯಿತು. ಶಿಶುಗಳ ಹೃದಯಬಡಿತ ನಿಧಾಗತಿಯಲ್ಲಿದ್ದ ಕಾರಣ ವೈದ್ಯರು ಜೀವರಕ್ಷಕ ಪುನಶ್ಚೇತನ ಕ್ರಮಗಳನ್ನು ಕೈಗೊಂಡರು. ಶಿಶುಗಳ ರಕ್ತಪರೀಕ್ಷೆಯಿಂದ ರಕ್ತದಲ್ಲಿ ಪೊಟ್ಯಾಸಿಯಮ್ ಲವಣಾಂಶ ಹೆಚ್ಚಿರುವುದು ಕಂಡುಬAತು. ಪರಿಣಾಮವಾಗಿ ಶಿಶುಗಳು ಅತಿವಿರಳವಾದ 'ನಾನ್-ಆಲಿಗುರಿಕ್ ಹೈಪರ್ಕಲೆಮಿಯಾ' ಕಾಯಿಲೆಯಿಂದ ಬಳಲುತ್ತಿರುವುದನ್ನು ವೈದ್ಯರು ಗುರುತಿಸಿ ತಕ್ಷಣವೆ ಅಗತ್ಯದ ಚಿಕಿತ್ಸೆಯನ್ನು ನೀಡಿದರು. ಪ್ರಸೂತಿ ತಜ್ಞರು ಮತ್ತು ಮೆಡಿಸಿನ್ ವಿಭಾಗದ ತಜ್ಞವೈದ್ಯರು ತಾಯಿಗೆ ಸೂಕ್ತಚಿಕಿತ್ಸೆ ನೀಡಿ ಗುಣಪಡಿಸಿದರು.
ಯಶಸ್ವಿ ಚಿಕಿತ್ಸೆ ನೀಡಿ ಅವಳಿ ಶಿಶುಗಳನ್ನು ಪ್ರಾಣಾಪಾಯದಿಂದ ಪಾರುಮಾಡಿ ಪಾಲಕರ ಮೊಗದಲ್ಲಿ ಸಂತಸದ ನಗು ಮೂಡಲು ಕಾರಣರಾದ ಚಿಕ್ಕಮಕ್ಕಳ ತಜ್ಞರಾದ ಡಾ.ಗಂಗಾಧರ ಮಿರ್ಜಿ, ಡಾ.ಪಲ್ಲವಿ ಎನ್.ಚರಂತಿಮಠ, ಡಾ.ಅನಿತಾ, ಡಾ.ಬೀಳಗಿ ತಂಡವನ್ನು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಎಸ್‌ಎನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಮತ್ತು ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಅಭಿನಂದಿಸಿದ್ದಾರೆ.