ಬದರಿಧಾಮದ ತಪೋನಿಧಿ ಕೃತಿ ಬಿಡುಗಡೆ ಇಂದು

ಬದರಿಧಾಮದ ತಪೋನಿಧಿ ಕೃತಿ ಬಿಡುಗಡೆ ಇಂದು
ಬಾಗಲಕೋಟೆ: ನಮ್ಮ ದೇಶದ ಶ್ರೇಷ್ಠ ವೀಣಾವಾದಕ, ದತ್ತಾತ್ರೇಯ ವೀಣೆ ಸಂಶೋಧಕ ದಿ.ದತ್ತಾತ್ರೇಯ ಪರ್ವತೀಕರ ಅವರ ಸಂಗೀತಮಯ ಬದುಕಿನ ಕುರಿತ ಬದರಿಧಾಮದ ತಪೋನಿಧಿ ಕೃತಿ ಬಿಡುಗಡೆ ಸಮಾರಂಭವನ್ನು ಸೆ.೨೨ ರಂದು ಸಂಜೆ ೫ಕ್ಕೆ ಇಲ್ಲಿನ ನವನಗರ ಕಲಾಭವನದಲ್ಲಿ ನಡೆಯಲಿದೆ ಎಂದು ಕೃತಿ ಲೇಖಕ ರಾಜೇಂದ್ರ ಪರ್ವತೀಕರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ರತ್ನ ಪಂ.ಭೀಮಸೇನ್ ಜೋಶಿ ಅವರ ಪುತ್ರಿ, ರಂಗ ಕಲಾವಿದೆ ಉಷಾ ಕುಲಕರ್ಣಿ ಕೃತಿ ಲೋಕಾರ್ಪಣೆಗೊಳಿಸುವರು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ತಬಲಾವಾದಕ ಪಂ.ರಾವ್‌ಸಾಹೇಬ್ ಮೋರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ದೆಹಲಿಯ ಸಿತಾರ್ ವಾದಕ ಪಂಡಿತ್ ಡಾ.ಗೋಪಾಲಕೃಷ್ಣ ಶಹಾ, ಕೃತಿಯ ಲೇಖಕ ರಾಜೇಂದ್ರ ಪರ್ವತೀಕರ, ಬೆಂಗಳೂರಿನ ಮೋಹನ ಪರ್ವತೀಕರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರ್ವತೀಕರ ಅವರ ಬದುಕಿನ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಿದರು.
ನಂತರ ದೆಹಲಿಯ ಸಿತಾರ್ ವಾದಕ ಡಾ.ಗೋಪಾಲಕೃಷ್ಣ ಶಹಾ ಅವರಿಂದ ಸಿತಾರ್ ವಾದನ ಹಾಗೂ ವಾಸುದೇವ ವಿನೋದಿನಿ ನಾಟ್ಯಸಭೆಯಿಂದ ಹಕ್ಕಿಯ ಹೆಗಲೇರಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಿಷನ್ ಟ್ರಸ್ಟ್ ಹಾಗೂ ವಾಸುದೇವ ವಿನೋದಿನಿ ನಾಟ್ಯ ಸಭೆ ಸಹಯೋಗದಲ್ಲಿ ಗುಳೇದಗುಡ್ಡದ ನಾದಯೋಗಿ ದತ್ತಾತ್ರೇಯ ರಾಮರಾವ್ ಪರ್ವತೀಕರ ಸಂಗೀತ ಹಾಗೂ ಸಾಂಸ್ಕೃತಿಕ ಸ್ಮಾರಕ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ರಾಜೇಂದ್ರ ತಿಳಿಸಿದ್ದಾರೆ.
ನಿವೃತ್ತ ಉಪನ್ಯಾಸಕ ಸುರೇಶ ಪರ್ವತೀಕರ, ವಿನಯ ಪರ್ವತೀಕರ, ಅನಂತ ಪುರೋಹಿತ, ಸಚಿನ್ ದೇಸಾಯಿ ಸೇರಿದಂತೆ ಇತರರಿದ್ದರು.
ಅಪ್ರತಿಮ ಸಾಧಕ ನಾದಯೋಗಿ
ದತ್ತಾತ್ರೇಯ ಪರ್ವತೀಕರ ೧೯೧೬ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದವರು. ನಾದಾನಂದ ಬಾಪು ಎಂಬ ಗುರುಗಳ ಬಳಿ ಸಿತಾರ್ ಅಧ್ಯಯನ ನಡೆಸಿದರು. ನಂತರ ರುದ್ರವೀಣೆ, ವಿಚಿತ್ರ ವೀಣೆ ಕೂಡ ಕಲಿತರು. ಈ ತಂತಿವಾದ್ಯಗಳಲ್ಲಿ ಕೊರತೆ ಇದೆ ಎಂದು ನಿರ್ಧರಿಸಿ ಸ್ವರಮಂಡಲ, ಸಿತಾರ್ ಹಾಗೂ ರುದ್ರವೀಣೆಯ ಉತ್ತಮ ಅಂಶಗಳನ್ನು ಆಯ್ದುಕೊಂಡು ಸ್ವತಃ ತಾವೇ ವೀಣೆ ನಿರ್ಮಿಸಿ ಅದನ್ನು ದತ್ತಾತ್ರೇಯ ವೀಣೆ ಎಂದು ಸಂಗೀತ ಲೋಕಕ್ಕೆ ಸಮರ್ಪಿಸಿದರು. ಈ ವೀಣೆ ತಯಾರಿಸುವಾಗ ಅನೇಕ ವೈಜ್ಞಾನಿಕ ಅಂಶಗಳ ಬಗ್ಗೆ ಭಾರತರತ್ನ ಸರ್ ಸಿ.ವಿ.ರಾಮನ್ ಅವರೊಂದಿಗೆ ತಂತಿಗಳ ರಚನೆ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ. ಈ ವೀಣೆಯನ್ನು ಇಂದಿಗೂ ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಭಾರತೀಯ ಸಾಂಪ್ರದಾಯಿಕ ವಾದ್ಯಗಳ ಸಂಗ್ರಹಾಗಾರದಲ್ಲಿ ನೋಡಬಹುದಾಗಿದೆ. ನಮ್ಮ ದೇಶದ ಮೊದಲ ರಾಷ್ಟçಪತಿ ರಾಜೇಂದ್ರ ಪ್ರಸಾದ್ ಅವರಿಗೆ ವೀಣೆ ಕಲಿಸಿದ ಖ್ಯಾತಿಯೂ ಇವರದ್ದಾಗಿದೆ.