ಹರಿಪ್ರಸಾದ್ ಹೇಳಿಕೆಗೆ ಬ್ರಾಹ್ಮಣ ಸಮಾಜ ಖಂಡನೆ 

ಹರಿಪ್ರಸಾದ್ ಹೇಳಿಕೆಗೆ ಬ್ರಾಹ್ಮಣ ಸಮಾಜ ಖಂಡನೆ 
ಬಾಗಲಕೋಟೆ: ಜಾತಿ ಜನಗಣತಿ ವಿಚಾರದಲ್ಲಿ ಗೌರವಯುತವಾಗಿ ತಮ್ಮ ಅಭಿಪ್ರಾಯ ಮಂಡಿಸಿರುವ ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಕುರಿತು ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕೆಂದು ಬ್ರಾಹ್ಮಣ ಸಮಾಜ ಆಗ್ರಹಿಸಿದೆ. 
ಈ ಕುರಿತು ಜಂಟಿ ಪ್ರಕಟಣೆ ಬಿಡುಗೆಗೊಳಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಹಾಗೂ ಬ್ರಾಹಣ ತರುಣ ಸಂಘಗಳು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾಗಿ ಮಾತನಾಡಲು ಹಕ್ಕಿದೆ. ಜಾತಿ ಜನಗಣತಿ ವಿಚಾರದಲ್ಲಿ ಶ್ರೀಗಳು ಯಾರನ್ನೂ ಟೀಕಿಸಿಲ್ಲ. ಸಮ ಸಮಾಜ ನಿರ್ಮಾಣವಾಗಬೇಕಾದರೆ ಅಲ್ಲಿ ಜಾತಿಗಳನ್ನು ಇಬ್ಭಾಗ ಮಾಡಿ ವೈಭವೀಕರಿಸಬಾರದು ಎಂಬುದಷ್ಟೇ ಅವರ ಹೇಳಿಕೆಯಾಗಿದೆ. ಆದರೆ ಅವರ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಹರಿಪ್ರಸಾದ್ ಅವರು ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು, ಅವರು ಕೂಡಲೇ ಕ್ಷಮೆಯಾಚಿಸದಿದ್ದರೆ ಸಮಾಜ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿವೆ.
ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ, ಜಿಲ್ಲಾಧ್ಯಕ್ಷ ನರಸಿಂಹ ಆಲೂರ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ಕಾರ್ಯದರ್ಶಿ ಡಿ.ಬಿ.ಕುಲಕರ್ಣಿ, ಹುನಗುಂದದ ವಕೀಲ ವೆಂಕಟೇಶ ದೇಶಪಾಂಡೆ ಮತ್ತಿತರರು ಹರಿಪ್ರಸಾದ್ ಹೇಳಿಕೆ ಖಂಡಿಸಿದ್ದಾರೆ.