ನಕಲಿ ಪ್ರಮಾಣ ಪತ್ರ ವಿತರಣೆ ಆರೋಪ: ಧರಣಿ

ನಕಲಿ ಪ್ರಮಾಣ ಪತ್ರ ವಿತರಣೆ ಆರೋಪ: ಧರಣಿ
ನಕಲಿ ಪ್ರಮಾಣ ಪತ್ರ ವಿತರಣೆ ಆರೋಪ: ಧರಣಿ
ಬಾಗಲಕೋಟೆ: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ನಾಯಕ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ ಎಂದು ದೂರಿ ಸೋಮವಾರ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು
ಜಿಲ್ಲಾಡಳಿತ ಭವನದ ಮುಂಭಾಗ ಮಹಾಸಭಾ ನೇತೃತ್ವದಲ್ಲಿ ಸಮುದಾಯದವರು ಧರಣಿ ನಡೆಸಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜಿಲ್ಲೆಯಲ್ಲಿ ಅಧಿಕಾರಿಗಳು ನಕಲಿ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು. 
ಮಹಾಸಭಾ ಜಿಲ್ಲಾಧ್ಯಕ್ಷ ಧ್ಯಾಮಣ್ಣ ಗಾಳಿ ಅವರು ಮಾತನಾಡಿ, ಜಿಲ್ಲೆಯ ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗದಲ್ಲಿ ಮುಂಬಡ್ತಿ ಪಡೆದಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಜಮಖಂಡಿ ತಾಲೂಕಿನಲ್ಲಿ ಅಂದಾಜು ೩ ಸಾವಿರಕ್ಕೂ ಹೆಚ್ಚು ಜನರು ನಕಲಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅದರಂತೆ ಮುಧೋಳ ತಾಲೂಕಿನಲ್ಲಿ ೮೪೩, ಬೀಳಗಿ, ಬಾಗಲಕೋಟೆ, ಬಾದಾಮಿ, ಇಳಕಲ್, ಹುನಗುಂದ, ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ತಲಾ ಸಾವಿರಕ್ಕೂ ಹೆಚ್ಚು ಜನರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ತಿಳಿಸಿದರು.
ಈ ರೀತಿ ಸುಳ್ಳು ಪ್ರಮಾಣ ಪತ್ರ ನೀಡುವುದರಿಂದ ನಿಜವಾದ ಪರಿಶಿಷ್ಟ ಪಂಗಡದವರಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಆದ ಕಾರಣ ಸುಳ್ಳು ಜಾತಿ ಪ್ರಮಾಣ ಪತ್ರ ಡೆದ ಎಲ್ಲ ಮೇಲೆ ಅತೀ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 
ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕ್ಯಾದಿಗೇರಿ, ರಾಜು ನಾಯ್ಕರ, ಹಣಮಂತ ಡೋಣಿ, ನಿಂಗಪ್ಪ ಕ್ಯಾದಿಗೇರಿ ಇತರರು ನೇತೃತ್ವ ವಹಿಸಿದ್ದರು.